ದಿನಕ್ಕೊಂದು ಕಥೆ 1112

*🌻ದಿನಕ್ಕೊಂದು ಕಥೆ🌻*
       *ಆತ್ಮದ ಅರಿವು*

ಒಬ್ಬ ರಾಜನಿಗೆ, ಬಾಲ್ಯದಲ್ಲಿ ಒಬ್ಬ ಮಿತ್ರನಿದ್ದ. ಅವರಿಬ್ಬರೂ ಒಟ್ಟಿಗೆ ಗುರುಕುಲದಲ್ಲಿ ಓದುತ್ತಿದ್ದರು. ಕಾಲಾಂತರದಲ್ಲಿ  ಎಲ್ಲವನ್ನು ಬಿಟ್ಟು ಆ ಮಿತ್ರ ಸನ್ಯಾಸಿಯಾದ.  ಯುವ ರಾಜನಾಗಿದ್ದವನು, ಸಿಂಹಾಸನವನ್ನು ಏರಿದ.

    ರಾಜ ,ದೂರ ದೂರದ ರಾಜ್ಯಗಳನೆಲ್ಲ ಗೆದ್ದು ,ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ಹೊಸ ರಾಜಧಾನಿಯನ್ನು ನಿರ್ಮಿಸಿದ. ಎಲ್ಲಾ ಕಡೆಗಳಲ್ಲಿ ಈ ರಾಜನ ಕೀರ್ತಿ ವೈಭವ ಹರಡಿತು. 

   ಒಂದು ದಿನ ಈ ರಾಜನ ಹಳೆಯ ಮಿತ್ರ, ಸನ್ಯಾಸಿ ,ಇವನ ರಾಜಧಾನಿಯನ್ನು ಸಮೀಪಿಸಿದ. ರಾಜನಿಗೆ ಎಲ್ಲವನ್ನು ತೊರೆದು ಸಂನ್ಯಾಸಿಯಾದ, ತನ್ನ  ಆಪ್ತ ಮಿತ್ರ ಬಂದಿದ್ದಾನೆಂದು‌ತಿಳಿದು, ಅವನನ್ನು ನೋಡಬೇಕೆಂದೆನಿಸಿತು. ಆತ ಸಿಗುವುದೇ ಬಹಳ ಅಪರೂಪ, ನಾನು ಆತನನ್ನು ಸ್ವಾಗತಿಸಿ ಸನ್ಮಾನಿಸಬೇಕೆಂದುಕೊಂಡು ,ತನ್ನ ಇಡೀ  ನಗರವನ್ನು  ಅಲಂಕರಿಸಿ ಸಜ್ಜುಗೊಳಿಸಿದ. 

    ಯಾವ ಸಂಜೆ ಆತನ ಮಿತ್ರ ನಗರವನ್ನು ಪ್ರವೇಶಿಸಬೇಕಾಗಿತ್ತೊ, ಅಂದು ಇಡೀ ನಗರವೂ ದೀಪಾವಳಿಯನ್ನು ಆಚರಿಸುತ್ತಿತ್ತು.ಎಲ್ಲಾ ಮನೆ ಮನೆಗಳಲ್ಲಿ ‌ದೀಪಬೆಳಗಿಸಿದ್ದರು.ಸನ್ಯಾಸಿ ನಗರವನ್ನು ಪ್ರವೇಶಿಸುವ ದ್ವಾರದಲ್ಲಿ ರತ್ನಗಂಬಳಿಯನ್ನು ಹಾಸಲಾಗಿತ್ತು. ಸ್ವತಃ ಮಹಾರಾಜನೇ ದ್ವಾರದ ಬಳಿಗೆ ಬಂದು ನಿಂತು ಆತನನ್ನು ಎದುರುಗೊಳ್ಳಲು ಸಿದ್ದನಾಗಿದ್ದ. 

     ಈ ಎಲ್ಲಾ ಸ್ವಾಗತದ ಸಿದ್ಧತೆ ನಡೆಯುತ್ತಿರುವಾಗಲೇ, ಒಬ್ಬ ಮನುಷ್ಯ, ಸನ್ಯಾಸಿಯ ಬಳಿಗೆ ಬಂದು, ರಾಜ, ತನ್ನ ಧನ ,ದೌಲತ್ತು ಅಧಿಕಾರಗಳನ್ನು ನಿನ್ನೆದುರಿಗೆ ಪ್ರದರ್ಶಿಸಲು ಪ್ರಯತ್ನಿಸುತ್ತಿದ್ದಾನೆ, ಹಾಗಾಗಿ  ಇಡೀ ರಾಜಧಾನಿಯನ್ನು ವೈಭವದಿಂದ ಸಜ್ಜುಗೊಳಿಸಿದ್ದಾನೆ. ಇದರ ಮೂಲಕ ಅವನು ನಿಮ್ಮನ್ನು ದರಿದ್ರರೆಂದು, ಭಿಕಾರಿಗಳೆಂದು ,ಸಾಬೀತುಪಡಿಸಲು ಇದೊಂದು ತಂತ್ರವಿರಬೇಕೆಂದು , ಅವನ ತಲೆಯಲ್ಲಿ ತುಂಬುತ್ತಾನೆ.

   ಆ ಸನ್ಯಾಸಿಯಾದರೊ, ಆತ ತನ್ನ ಪರಮ ಸ್ನೇಹಿತ, ಅವನು ಹೇಗೆಂದು ನನಗೆ ಗೊತ್ತು, ಎಂದು ಹೇಳುವುದನ್ನು ಬಿಟ್ಟು, ಹಾಗೋ, ಆತ ತನ್ನ ಸಂಪತ್ತು ವೈಭವವನ್ನು ಪ್ರದರ್ಶಿಸಲು ಪ್ರಯತ್ನಿಸಿದರೆ, ನಾನೂ ಆತನಿಗೆ ನನ್ನ ಒಂದಿಷ್ಟು , ಬಲವನ್ನು ತೋರಿಸುತ್ತೇನೆ, ಎಂದ. ಇದನ್ನು ಕೇಳಿದ ಆತನ ಶಿಷ್ಯರಿಗೆ ಆಶ್ಚರ್ಯವಾಯಿತು. ಸನ್ಯಾಸಿಯ ಬಳಿ ತೋರಿಸಲಾದರೂ ಏನಿದೆ?  ತೋರಿಸಲು ಬೇರೆ ಏನು ಇಲ್ಲವಲ್ಲಾ,  ಇವನು ಇನ್ನೇನು ತೋರಿಸಬಹುದು?  ಎಂದು ಕೊಂಡರು.

    ‌ ರಾಜ ಸನ್ಯಾಸಿ ಬರುವ ದಾರಿಯಲ್ಲಿ, ರತ್ನಗಂಬಳಿಯನ್ನು ಹಾಸಿದ್ದ. ಆತ ನಡೆದು ಬರುತ್ತಿರುವುದನ್ನು ನೋಡಿ ಜನರು ಆಶ್ಚರ್ಯಚಕಿತರಾದರು. ಆ ದಿನ ಎಲ್ಲೂ ಮಳೆಯಾಗದಿದ್ದರೂ, ಸನ್ಯಾಸಿಯ ಮಂಡಿಗಳವರೆಗೆ ಕೆಸರು  ಮೆತ್ತಿಕೊಂಡಿತ್ತು. ಸನ್ಯಾಸಿ ಬೇಕೆಂದೇ ತಾನೇ ಕೆಸರು ಮೆತ್ತಿಕೊಂಡು ಬಂದಿದ್ದ.ರಾಜನಿಗೂ ಉಳಿದವರಿಗೂ ಅದನ್ನು ನೋಡಿ ಆಶ್ಚರ್ಯವಾಯಿತು. ಸನ್ಯಾಸಿ ಅರಮನೆಯ ಮೆಟ್ಟಿಲನ್ನು ಏರುತ್ತಿರುವಾಗ ರಾಜನಿಗೆ ಕುತೂಹಲ ತಡೆಯಲಾಗದೇ, ಮಿತ್ರ ನಿನ್ನ ಕಾಲಿಗೆ ಇಷ್ಟೊಂದು ಕೆಸರು ಮೆತ್ತಿಕೊಂಡಿದ್ದಾದರೂ ಹೇಗೆ ? ಎಂದು ನಾನು ಕೇಳಬಹುದೇ ಎಂದ. 

    ಆಗ ಸನ್ಯಾಸಿ, ವ್ಯಂಗ್ಯದಿಂದ ನಗುತ್ತಾ, ನೀನು ರಸ್ತೆಯಲ್ಲಿ ರತ್ನಗಂಬಳಿ ಹಾಸಿ ,ನಿನ್ನ ವೈಭವವನ್ನು ಪ್ರದರ್ಶಿಸಿದರೆ, ನಾನು ಸನ್ಯಾಸಿಯಾಗಿ , ಕೆಸರುಮೆತ್ತಿ ಕೊಂಡಿರುವ ನನ್ನ ಕಾಲುಗಳ ಮೂಲಕ ನನ್ನ ಸಂನ್ಯಾಸತ್ವವನ್ನು ಪ್ರದರ್ಶಿಸಬಾರದೇ? ,  ನಿನ್ನ ರಾಜ ವೈಭವವೆಲ್ಲಾ   ನನಗೆ ಕೆಸರಿನ‌ ಸಮಾನ  ಎಂದ.

     ಆಗ ರಾಜ ನಗುತ್ತಾ ಹೇಳಿದ, ನೀನು ಮಹಾ ದೊಡ್ಡ ಜ್ಞಾನಿ,ನಮ್ಮಿಬ್ಬರ ನಡುವೆ, ಬಹಳವಾದ ವ್ಯತ್ಯಾಸವಿದೆಯೆಂದು, ನಾನು ಭಾವಿಸಿದ್ದೆ,  ಆದರೆ ಈಗ ನನಗೆಲ್ಲವೂ ಗೊತ್ತಾಯಿತು .ನಾವಿಬ್ಬರು ಬಹಳ ಹಳೆಯ ಸ್ನೇಹಿತರು, ಹಾಗೂ ನಮ್ಮಿಬ್ಬರ ನಡುವೆ, ಯಾವುದೇ ವ್ಯತ್ಯಾಸವೂ ಇಲ್ಲ, ನಾನು ಎಲ್ಲಿದ್ದೇನೋ, ನೀನು ಕೂಡ ಅಲ್ಲೇ ಇದ್ದೀಯ, ನಾನು ಎಲ್ಲವನ್ನೂ ಪಡೆದು, ಯಾವ ಅಹಂಕಾರವನ್ನು, ಪ್ರದರ್ಶಿಸುತ್ತಿರುವೆನೊ, ನೀನು, ಅದೇ ಅಹಂಕಾರವನ್ನು, ಎಲ್ಲವನ್ನು ಬಿಟ್ಟು ಪ್ರದರ್ಶಿಸುತ್ತಿರುವೆ ಅಷ್ಟೇ , ಎಂದ ರಾಜ.

    ಯಾವುದನ್ನೇ ಆಗಲಿ, ಪಡೆಯುವುದರಲ್ಲಾಗಲಿ, ಬಿಡುವುದರಲ್ಲಾಗಲಿ, ಯಾವುದೇ ವ್ಯತ್ಯಾಸವಿಲ್ಲ, ವ್ಯತ್ಯಾಸವಿರುವುದು, ನಾನು , ಎಂಬುದನ್ನು ಬಿಡುವುದರಲ್ಲಿ ಇರುವುದು. ಸಂಪತ್ತು ಸುಖ ಸೌಲಭ್ಯಗಳನ್ನು ತೊರೆದ ಮಾತ್ರಕ್ಕೆ, ನಾನು ಎಂಬ ಅಹಂ ಭಾವ ಬಿಟ್ಟು ಹೋಗುವುದಿಲ್ಲ, ನಾನು ,ವನ್ನು ವಿಸರ್ಜಿಸಿದಾಗ ಮಾತ್ರ, ಆತ್ಮದ ಜ್ಞಾನ ಉಂಟಾಗುವುದು. 

    ನಾನು ,ಎಂಬ, ಅಹಂಕಾರದ  ದೊಡ್ಡ ಗೋಡೆಯ ಹಿಂದೆ, ಆತ್ಮದ ಜ್ಯೋತಿ ಪ್ರಕಾಶಿಸುತ್ತಿರುತ್ತದೆ, ಈ ಗೋಡೆ ಕುಸಿಯುವವರೆಗೂ, ಆತ್ಮ ಜ್ಯೋತಿಯ‌ ಪ್ರಕಾಶ ನಮಗೆ ಕಾಣುವುದಿಲ್ಲ.  ನಾವು ಎಂತಹ ದೊಡ್ಡ ಸಾಧನೆಯನ್ನು ಮಾಡಿದ್ದರೂ ಕೂಡಾ, ನಾನು, ಎಂಬುದು ನಮ್ಮನ್ನ ಬಿಡದಿದ್ದರೆ, ಎಲ್ಲವೂ  ವ್ಯರ್ಥವೇ.

  ಯಾರು ಎಲ್ಲವನ್ನು ತೊರೆದು ಶೂನ್ಯರಾಗುವರೋ, ಅವರಿಗೆ ಮಾತ್ರ ಆತ್ಮದ ಅರಿವು ಉಂಟಾಗುವುದು. 

ಕೃಪೆ:ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059