ದಿನಕ್ಕೊಂದು ಕಥೆ 1113
*🌻ದಿನಕ್ಕೊಂದು ಕಥೆ🌻*
*ಅಧಿಕಾರ ನಿರ್ವಹಣೆ.*
ಒಬ್ಬ ರಾಜ ತನ್ನ ಸೈನ್ಯದೊಂದಿಗೆ ಬೇಟೆಯಾಡಲೆಂದು ಕಾಡಿಗೆ ಬಂದ. ಬೇಸಿಗೆಯ ಕಾಲವಾದ್ದರಿಂದ ಇಡೀ ಕಾಡು ಒಣಗಿ ಹೋಗಿತ್ತು. ಅಲ್ಲೊಬ್ಬ ಸನ್ಯಾಸಿ, ಮರ-ಗಿಡಗಳ ಬುಡವನ್ನು ಕೆದಕುತ್ತಲಿದ್ದ, ಬಿಸಿಲಿನ ತಾಪದಿಂದ ಅವನ ಮೈಯಿಂದ ಬೆವರು ಸುರಿದು ಹೋಗುತ್ತಿತ್ತು. ಆದರೂ ಕೂಡ ಕೆಲಸ ಮಾಡುತ್ತಿದ್ದ. ಇದನ್ನು ಗಮನಿಸಿದ ರಾಜ , ತಾವು ಇಲ್ಲಿ ಏನು ಮಾಡುತ್ತಿದ್ದೀರಿ? ಎಂದು ಕೇಳಿದ.
ಈಗ ಬೇಸಿಗೆಯಾದ್ದರಿಂದ , ಗಿಡದ ಬುಡವನ್ನು ಬಿಡಿಸುತ್ತಿರುವೆ, ಮುಂದೆ ಮಳೆಬಂದಾಗ ಗಿಡಗಳ ಬುಡಕ್ಕೆ ನೀರು ಹಾಗೇ ನಿಲ್ಲಲು ಸುಲಭವಾಗುತ್ತದೆ ಎಂದು ಹೇಳಿದ.
ಆಗ ರಾಜ, ಈ ಕಾಡಿನ ಗಿಡ ನಿನಗೆ ಹೀಗೆ ಮಾಡು ಎಂದು ಕೇಳಿತೇ? ಎಂದು ಹಾಸ್ಯ ಮಾಡಿದ . ಆಗ ಸನ್ಯಾಸಿ ನಗುತ್ತಾ,
ಕೇಳಲಿಕ್ಕೆ ಅವಕ್ಕೆ ಬಾಯಿ ಎಲ್ಲಿದೆ? ಎಂದ .
ರಾಜನಿಗೆ ಸನ್ಯಾಸಿಯ ಮಾತು ತಮಾಷೆಯೆನಿಸಿ, ತಾವು ಧ್ಯಾನ, ತಪಸ್ಸು ಮಾಡಿಕೊಂಡಿರುವುದನ್ನು ಬಿಟ್ಟು, ಇಂತಹ ಬೇಡದ ಕೆಲಸವನ್ನು ಈ ಬಿಸಿಲಿನಲ್ಲಿ ಯಾಕೆ ಮಾಡುತ್ತಿರುವಿರೋ? ಎಂದ.
ತಕ್ಷಣ ಅವನನ್ನು ದೃಷ್ಟಿಸಿ ನೋಡುತ್ತಾ ಸನ್ಯಾಸಿ, ನಿಜವಾಗಿಯೂ, ನೀನು ರಾಜನೇನಾ? ಎಂದ.
ಇವನ ಮಾತಿನಿಂದ ರಾಜ ಬಹಳವಾಗಿ ಕೋಪಗೊಂಡು, ನನ್ನನ್ನೇ ಅವಮಾನಿಸುವೆಯಲ್ಲಾ ನಿನಗೆಷ್ಟು ಧೈರ್ಯ? ಸೈನಿಕರೇ ಇವನನ್ನು ಬಂಧಿಸಿ, ಎಂದು ಆಜ್ಞಾಪಿಸಿದ.
ಆದರೂ ಕೂಡಾ ಸನ್ಯಾಸಿ, ಧೃತಿಗೆಡದೆ, ನಿನ್ನ ಈ ನೆಡವಳಿಕೆಯಿಂದ, ಮತ್ತೆ ನೀನು, ರಾಜನಲ್ಲವೇ ಅಲ್ಲಾ ಎಂದು ನಿರೂಪಿಸಿಬಿಟ್ಟೆ, ಎಂದು ನಗುತ್ತಾ ಹೇಳಿದ.
ಈಗ ರಾಜನಿಗೆ, ಇನ್ನಷ್ಟು ಕೋಪ ಜಾಸ್ತಿಯಾಗಿ, ಈ ಸೈನ್ಯ, ಕುದುರೆ ಪರಿವಾರ ವೈಭವ ಎಲ್ಲವನ್ನು ನೋಡಿ ಕೂಡಾ ನನ್ನನ್ನು ರಾಜನಲ್ಲ ಎಂದು ಹೇಳಿತ್ತಿಯಲ್ಲಾ , ನಿನಗೆಷ್ಟು ಸೊಕ್ಕು, ನನಗೆ ಬರುತ್ತಿರುವ ಕೋಪಕ್ಕೆ ನಿನ್ನನ್ನು ಕೊಂದು ಹಾಕಿಬಿಡಬೇಕೆನಿಸುತ್ತಿದೆ, ಎಂದ.
ಆಗ ಸನ್ಯಾಸಿ, ಇನ್ನಷ್ಟು ಶಾಂತನಾಗಿ, ಸಾಯಿಸು, ನಿನ್ನ ಕೈಲಿ, ಆಗುವುದು ಅದೊಂದೇ ತಾನೇ ಎಂದ.
ಈಗ ರಾಜ ಯೋಚನೆಗೆ ಬಿದ್ದ, ಈ ಸನ್ಯಾಸಿ ಯಾವುದಕ್ಕೂ ಹೆದರುವನಲ್ಲಾ, ಶಾಂತ ರೀತಿಯಲ್ಲೇ, ನಾನು ಕೇಳಿದ್ದಕ್ಕೆಲ್ಲಾ ಉತ್ತರಿಸುತ್ತಿದ್ದಾನೆ, ಎಂದರೆ ಇದರಲ್ಲಿ ಏನೂ ಮರ್ಮವಿರಲೇಬೇಕು, ಎಂದುಕೊಂಡ.
ನಂತರ ಸನ್ಯಾಸಿಯ ಹತ್ತಿರಕ್ಕೆ ಬಂದು, ನಿಜವಾಗಿಯೂ ನೀನು ಸಾಯಲು ತಯಾರಿದ್ದೀಯಾ? ಎಂದು ಮತ್ತೆ ಪ್ರಶ್ನಿಸಿದ.
ಅದೇ ಆಗಬೇಕೆಂದಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ, ಎಂದು ನಗುತ್ತಾ ಶಾಂತನಾಗಿ ಹೇಳಿದ ಸನ್ಯಾಸಿ.
ರಾಜ ಈಗ ಅಸಹಾಯಕನಾದ. ಅವನನ್ನು ಕೇಳಿದ, ನಿನ್ನ ಪ್ರಕಾರ ನಾನು ರಾಜನೆಂದೆನಿಸಿ ಕೊಳ್ಳಲು, ಹೇಗೆ ಇರಬೇಕು?
ನೀನು ನನ್ನನ್ನು ಏನು ಕೇಳಿದೆ,ಹೇಳು? ಮರ ಕೇಳದಿದ್ದರೂ, ಅದರ ಬುಡವನ್ನು ಏಕೆ ಬಿಡಿಸುತ್ತಿರುವೆ, ಎಂದೆಯಲ್ಲವೇ? ನಾನು ಈ ಕಾಡಲ್ಲೇ ಅಲೆಯುವವನು, ದಿನಾ ನೋಡುತ್ತಿರುವ ನನಗೆ ಯಾವ ಗಿಡಕ್ಕೆ ಏನು ಬೇಕು ಎಂದು ಅರ್ಥವಾಗುತ್ತದೆ. ರಾಜನಾದ ನಿನ್ನ ಬಳಿ, ನೀರು ಆಹಾರ ಎಲ್ಲವೂ ಇದ್ದರೂ ಆಯಾಸಗೊಂಡ ನನ್ನನ್ನು ನೋಡಿ ,ಕೆಲಸ ಮಾಡಿ ದಣಿದಿದ್ದಾನೆ, ಅವನಿಗೆ ಸ್ವಲ್ಪ ಸಹಾಯ ಮಾಡೋಣ, ಅಥವಾ ನೀರು ಆಹಾರ ಏನಾದರೂ ಬೇಕಾ ಎಂದು ವಿಚಾರಿಸೋಣ , ಎಂದು ಕೂಡಾ ನಿನಗೆ ಅನಿಸಲ್ಲಿಲ್ಲವಲ್ಲ, ಅಷ್ಟೂ ನಿನಗೆ ಅರ್ಥವಾಗಲಿಲ್ಲವೆಂದರೆ, ನೀನು ಪ್ರಜೆಗಳ ಬೇಕು ಬೇಡಗಳನ್ನು ಅವರ ಕಷ್ಟ ನಷ್ಟಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವೆ? ಅಧಿಕಾರ ಇರುವುದು ಸರಿಯೇ, ಆದರೆ ಅದನ್ನು ನಿಭಾಯಿಸುವುದಕ್ಕೆ ಅಂತಃಕರಣ, ಕರ್ತವ್ಯ ಪ್ರಜ್ಞೆ ಇರಬೇಕು, ಅಧಿಕಾರಕ್ಕೆ ಬೇಕಾಗಿರುವುದು ಅಹಂಕಾರವಲ್ಲ, ಒಬ್ಬ ತಾಯಿ ತನ್ನ ಮಗುವಿಗೆ ಏನು ಬೇಕು , ಏನು ಬೇಡಾ ಎಂಬುದನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತಾಳೊ, ಆ ರೀತಿಯ ವಾತ್ಸಲ್ಯ .
ಆಗ ಮಾತ್ರ ನೀನು ರಾಜನಾಗಿದ್ದಕ್ಕೂ ಸಾರ್ಥಕ. ಆಗ ನಿಜವಾಗಿ ರಾಜನೆನಿಸಿಕೊಳ್ಳುವ ಯೋಗ್ಯತೆ ಇರುತ್ತದೆ, ಎಂದು ಹೇಳಿದ.
ರಾಜನಿಗೆ ಅವನ ಮಾತಿನಲ್ಲಿ ಅರ್ಥವಿದೆ ಎನಿಸಿತು. ಏನೂ ಮಾತ ನಾಡದೇ,ಸಂನ್ಯಾಸಿ ಎದುರು ತಲೆ ತಗ್ಗಿಸಿದ.
ಅಧಿಕಾರ ,ಪದವಿ ಬಂದರೆ , ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳದೇ ,ಅದೊಂದು ಎಲ್ಲರ ಮೇಲಿನ ತನ್ನ ಜವಾಬ್ದಾರಿ, ಎಂದುಕೊಂಡು ಯಾವ ಲಾಲಸೆ ಇಲ್ಲದೇ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಿದರೆ, ಪ್ರಜಾ ಸೇವೆ ಸಾಧ್ಯವಾಗುವುದು. ಸುಮ್ಮನೆ, ದೊಡ್ಡ ದೊಡ್ಡ ಮಾತುಗಳಿಂದ ಭಾಷಣದಿಂದ ಆಶ್ವಾಸನೆಗಳಿಂದ ಯಾವ ಪ್ರಯೋಜನವೂ ಇಲ್ಲ.
ಕೃಪೆ:ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment