ದಿನಕ್ಕೊಂದು ಕಥೆ 1116
*🌻ದಿನಕ್ಕೊಂದು ಕಥೆ🌻*
*ಹೊಸ ಅಧ್ಯಾಯ*
" ಅಮ್ಮಾ, ಅಲ್ಲಮ್ಮಾ..ಎರಡು ತಿಂಗಳುಗಳ ಹಿಂದೆಯೇ ನಿನ್ನ ಔಷಧಿ ಗುಳಿಗೆಗಳು ಖಾಲಿಯಾಗಿತ್ತಲ್ಲವಾ? ನಿನ್ನ ಅಡ್ರೆಸ್ಸ್ ಗೆ ಕಳಿಸಿಕೊಡುತ್ತೇನೆ ಎಂದರೂ ಯಾಕೆ ಬೇಡಾ ಅಂದೆ. ಅಪ್ಪ ಏನಾದರೂ ಆ ಔಷಧಿ ತೆಗೆದುಕೊಳ್ಳುವುದಕ್ಕೂ ಅಡ್ಡಗಾಲು ಹಾಕಿದ್ರಾ? ನಿನ್ನ ಹಣೆಬರಹವೋ, ದುರಾದೃಷ್ಟವೋ ಒಂದೂ ನನಗೆ ಅರ್ಥವಾಗುತ್ತಿಲ್ಲ. ನಾನಿಲ್ಲಿ ಎಷ್ಟೇ ಚೆನ್ನಾಗಿದ್ದರೂ ನಿನ್ನನ್ನು ನೆನಪಿಸಿಕೊಂಡಾಗ ಕೆಲವೊಮ್ಮೆ ನಾನೂ ಡಿಸ್ಟರ್ಬ್ ಆಗಿಬಿಡುತ್ತೇನೆ. ಅಮ್ಮಾ..ಮುಂದಿನ ತಿಂಗಳು ಎರಡು ವಾರ ನಾನು ರಜ ಹಾಕಿದ್ದೇನೆ. ಒಂದು ವಾರ ಅತ್ತೆ ಮಾವನ ಜೊತೆಗೆ ಇದ್ದು ಬರುತ್ತೇನೆ. ಇನ್ನೊಂದು ವಾರ ನಿನ್ನ ಹಾಗೂ ಅಪ್ಪನ ಜೊತೆಯಲ್ಲಿ ಇರಬೇಕೆಂದು ಅಂದುಕೊಂಡಿದ್ದೇನೆ."
" ತುಂಬಾ ಖುಷಿಯಾಯಿತು ಮಧು. ನನಗೂ ನಿನ್ನ ಜೊತೆ ನಾಲ್ಕಾರು ದಿವಸಗಳು ಸಮಯ ಕಳೆಯಬೇಕೆಂಬ ಆಸೆಯಿದೆ. "
ಸಂತಸದಿಂದ ನುಡಿದರು ಅಮ್ಮ ವತ್ಸಲಾ.
ವತ್ಸಲಾ ಹಾಗೂ ಮಾಧವ ದಂಪತಿಗೆ ಇರುವುದು ಒಬ್ಬಳೇ ಮಗಳು ಮಧು. ಮದುವೆಯಾಗಿ ದೂರದ ಊರಿನಲ್ಲಿ ಗಂಡನ ಜೊತೆಗೆ ಹಾಯಾಗಿದ್ದಾಳೆ. ವತ್ಸಲಾ ಮಾತ್ರ ಇತ್ತೀಚಿನ ವರ್ಷಗಳಲ್ಲಿ ಡಿಪ್ರೆಶನ್ ದಿಂದ ಒದ್ದಾಡುತ್ತಿದ್ದಾಳೆ. ಪತಿ ಮಾಧವ ಸಭ್ಯಸ್ಥನೇನೋ ನಿಜ. ಆದರೆ ಜೀವನದುದ್ದಕ್ಕೂ ತನ್ನದೇ ಆದ ಕೆಲವು ಗುಣಗಳನ್ನು ಬೆಳೆಸಿಕೊಂಡಿದ್ದ. ತಾನು ಹೇಳಿದಂತೆ ನಡೆಯಬೇಕು, ಎಲ್ಲವೂ ತನ್ನ ನೇರದಲ್ಲೇ ಇರಬೇಕು...ಈ ತರಹದ ಸ್ವಭಾವದವನು ಮಾಧವ.
ತನ್ನ ಬದುಕಿನಲ್ಲಿ ಪರಿಸ್ಥಿತಿ ತನ್ನ ಹತೋಟಿಯಲ್ಲಿರದಿದ್ದಾಗ ತನ್ನೆಲ್ಲಾ ಸಿಟ್ಟು, ದರ್ಪ, ಅಹಂಗಳನ್ನು ತನ್ನ ಪತ್ನಿಯ ಮೇಲೆ ತೋರಿಸುತ್ತಿದ್ದ ಮಾಧವ. ತನ್ನದೇ ಆದ ಸ್ವಂತಿಕೆಯಿರಲಿಲ್ಲ ವತ್ಸಲಾಳಿಗೆ. ತನ್ನ ಪತಿ ಯಾವ ಸಮಯದಲ್ಲಿ ಯಾವ ಮನಸ್ಥಿತಿಯಲ್ಲಿರುತ್ತಾನೋ ಎನ್ನುವ ಭಯ, ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಳು ಜಾನಕಿ. ಕೊನೆ ಕೊನೆಗೆ ವತ್ಸಲಾಳ ಮಾನಸಿಕ ಸ್ಥಿತಿ ಹದಗೆಟ್ಟು ಎಂಟಿ ಡಿಪ್ರೆಶನ್ ಮಾತ್ರೆ ತೆಗೆದುಕೊಳ್ಳುವ ಮಟ್ಟಕ್ಕೆ ತಲುಪಿತ್ತು.
ಮಗಳು ಮಧು ಹೇಳಿದ ಹಾಗೆ ತನ್ನ ಅಪ್ಪ ಅಮ್ಮನ ಮನೆಗೆ ಬಂದಾಗ ಸಂಭ್ರಮಗೊಂಡಳು ವತ್ಸಲಾ. ತನ್ನ ಅಮ್ಮ ಖುಷಿಯಾಗಿರುವುದನ್ನು ನೋಡಿ ಸಂತಸಪಟ್ಟಳು ಮಧು.
" ಅಮ್ಮಾ, ನನಗಾಗಿ ಏನು ಸ್ಪೆಷಲ್ ಅಡುಗೆ ಮಾಡಿದ್ದೀಯಾ " ಎನ್ನುತ್ತಾ ಅಡುಗೆ ಮನೆಯಲ್ಲಿದ್ದ ಅಮ್ಮನ ಬಳಿಗೆ ಬಂದಳು ಮಧು.
"ಅದ್ಸರಿ ಅಮ್ಮಾ..ನಿನ್ನಲ್ಲಿ ಅದೇನು ಬದಲಾವಣೆ? ತುಂಬಾ ಗೆಲುವಾಗಿ ಕಾಣುತ್ತೀಯಾ. ಅಮ್ಮಾ ಡಿಪ್ರೆಶನ್ ಗೆ ಮಾತ್ರೆ ತೆಗೆದುಕೊಳ್ಳುವುದನ್ನು ಬಿಟ್ಟು ಬಿಟ್ಟೆಯಾ? ವೈದ್ಯರ ಸಲಹೆ ಪಡೆದುಕೊಂಡಿದ್ದೀಯಾ ತಾನೇ?"
'ಮಗಳೇ..ಅಪ್ಪ ಈಗ ಬದಲಾಗಿದ್ದಾರೆ. ಮೊದಲಿನ ಕೂಗಾಟ, ಹಾರಾಟ, ಆರ್ಭಟ, ಅಹಂಕಾರ ಯಾವುದು ಇಲ್ಲ. ನಾನೂ ಈಗ ಶಾಂತವಾಗಿದ್ದೇನೆ. "
"ಅದೇನು!!ಇಷ್ಟು ವರ್ಷಗಳು ಇಲ್ಲದ ಬದಲಾವಣೆ ಈಗ!!ಇಲ್ಲಮ್ಮಾ..ಅಪ್ಪ ಬದಲಾಗಲು ಸಾಧ್ಯವೇ ಇಲ್ಲ. ಹುಟ್ಟಿದಾಗಿನಿಂದಲೂ ನನ್ನ ಅಪ್ಪನ ಗುಣ ಸ್ವಭಾವಗಳನ್ನು ನೋಡಿಯೇ ಬೆಳೆದವಳು ನಾನೂ. ಅಪ್ಪನ ವಿಷಯ ನನಗೆ ಗೊತ್ತಿಲ್ಲವಾ?"
"ಇಲ್ಲ ಮಗಳೇ..ನಿನ್ನ ಅಮ್ಮ ಹೇಳುತ್ತಿರುವುದು ನಿಜ" ಅಮ್ಮ ಮಗಳು ಮಾತನಾಡುತ್ತಿರುವ ಅಲ್ಲಿಗೆ ಬಂದ ಮಾಧವ ನುಡಿದರು.
" ಅಪ್ಪಾ.. !! ನೀವು ಆಫೀಸಿಗೆ ಹೋಗಿಲ್ಲವಾ? ನೀವು ಒಂದು ದಿವಸವೂ ಆಫೀಸ್ ತಪ್ಪಿಸಿದವರಲ್ಲ. ಚಿಕ್ಕವಳಾಗಿದ್ದಾಗ ನನಗೆ ಹುಷಾರಿಲ್ಲದಿದ್ದಾಗಲೂ..ಅಮ್ಮನಿಗೆ ಅನಾರೋಗ್ಯವಾದಾಗಲೂ ಸಹ ನೀವು ಮನೆಯಲ್ಲಿದ್ದು ಸಹಾಯ ಮಾಡಿದವರಲ್ಲ. ಅಂತಹದ್ದರಲ್ಲಿ ಇಲ್ಲಿ..! ಮನೆಯಲ್ಲಿ ಇವತ್ತು..!! "
"ನಿಜ ಮಗಳೇ..ಇವತ್ತು ನೀನು ಬರುತ್ತಿಯೆಂದು ನಾನೂ ಮನೆಯಲ್ಲಿಯೇ ಇದ್ದೇನೆ. ನಿನಗೆ ಮುಖ ತೋರಿಸಲೂ ನನಗೆ ನಾಚಿಕೆಯಾಗುತ್ತಿದೆ. ನೀನು ಅದೆಷ್ಟು ಸಲ ನನ್ನ ಹತ್ತಿರ ಬೇಡಿಕೊಂಡಿದ್ದೆ. ಅಪ್ಪಾ ಬದಲಾಗಿ ಎಂದು. ನಾನು ನನ್ನ ಅಹಂ ಇಂದ ಹೊರಗೆ ಬರಲು ಪ್ರಯತ್ನವನ್ನೇ ಮಾಡಲಿಲ್ಲ. ನೀನು ದಣಿವಾರಿಸಿಕೋ..ಆಮೇಲೆ ಮಾತನಾಡೋಣ “ ಎನ್ನುತ್ತಾ ತನ್ನ ರೂಮಿಗೆ ಹೊರಟು ಹೋದ ಮಾಧವ.
' ಅಮ್ಮಾ..ಅಪ್ಪ ಎಷ್ಟೊಂದು ಬದಲಾಗಿದ್ದಾರೆ. ಏನು ಪವಾಡ ಮಾಡಿದೆ ಅಮ್ಮಾ.."
"ನನಗೂ ಗೊತ್ತಿಲ್ಲ ಮಗಳೇ..ಮನೆಯಲ್ಲಿದ್ದಾಗ ಆಗಾಗ ಇಲ್ಲೇ ಹೋಗಿ ಬರುತ್ತೇನೆ ಎಂದು ಹೇಳಿ ಹೊರಗೆ ಹೋಗುತ್ತಾರೆ. ಮನೆ ಬಿಟ್ಟ ಅರ್ಧ ಗಂಟೆಯಲ್ಲೇ ಹಿಂದಿರುಗಿ ಬರುತ್ತಾರೆ. "
ಹೇಗೂ ಅಪ್ಪ ಆಮೇಲೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ ಎಂದುಕೊಂಡ ಮಧು " ಹೌದಾ ಅಮ್ಮಾ.." ಎಂದಷ್ಟೇ ಹೇಳಿ ಆ ವಿಷಯವನ್ನು ಮತ್ತೆ ಕೆಣಕಲು ಹೋಗಲಿಲ್ಲ. ಅಮ್ಮನ ಜೊತೆಗೆ ಸಂತೋಷದಿಂದ ಹರಟೆ ಹೊಡೆಯಲು ಆರಂಭಿಸಿದಳು ಮಧು.
ಮಧು..ನಿನಗಿಷ್ಟವಾದ ಬೋಂಡಾ, ಕೇಸರಿಬಾತ್ ಮಾಡಿದ್ದೇನೆ. ಅಪ್ಪನನ್ನು ಕರೆದುಕೊಂಡು ಬಾ ಎಂದು ವತ್ಸಲಾ ಅವಸರಿಸಿದಳು.ಮಾಧವ, ಮಧು ಡೈನಿಂಗ್ ಟೇಬಲ್ ನ ಮುಂದೆ ಬಂದು ಕುಳಿತರು. ತಿಂಡಿ ತಿಂದು ಕಾಫಿ ಕುಡಿದಾದ ಮೇಲೆ ಮಧು ಹೇಳಿದಳು.
" ಅಪ್ಪಾ.. ಆಮೇಲೆ ಮಾತನಾಡೋಣ ಎಂದು ಹೇಳಿದ್ರಿ. ಈಗ ಮಾತನಾಡಬಹುದಲ್ಲವಾ? "
" ಖಂಡಿತ ಮಗಳೇ, ವತ್ಸಲಾಳಿಗೂ ಇದರ ಬಗ್ಗೆ ಏನೂ ಗೊತ್ತಿಲ್ಲ. ಸಮಯ ಬಂದಾಗ ನಾನೇ ಹೇಳಬೇಕು ಎಂದು ಕಾಯುತ್ತಿದ್ದೆ. ವತ್ಸಲಾ.. ನೀನೂ ಬಾ. ಇಲ್ಲೇ ಕುಳಿತುಕೋ..ಕೆಲಸ ಆಮೇಲೆ ಮಾಡಿದರಾಯಿತು. "
ಗಂಡನ ಮಾತಿನಂತೆ ವತ್ಸಲಾ ಗಂಡನ ಸನಿಹ ಬಂದು ಕುಳಿತುಕೊಂಡಳು.
ಮಾಧವನ ಮುಖದಲ್ಲಿ ಎಂದೂ ಕಾಣದ ಶಾಂತತೆ ಇತ್ತು. ಮಾಧವ ನಿಧಾನವಾಗಿ ಮಾತು ಆರಂಭಿಸಿದರು.
"ವತ್ಸಲಾ, ನಾನು ಕೆಲವು ತಿಂಗಳುಗಳ ಹಿಂದೆ ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ. ನೆನಪಿದೆಯಾ? "
" ಹೂಂ. ನೆನಪಿಲ್ಲದೆ ಏನು? ಆ ದಿನ ನೀವು ನಿಮ್ಮ ಸೇಹಿತನ ಮನೆಯಲ್ಲೇ ಉಳಿದುಕೊಂಡಿದ್ರಿ. ನಾನು ಅಡುಗೆ ಮಾಡಿಕೊಂಡು ನಿಮಗಾಗಿ ಕಾದಿದ್ದೆ. ರಾತ್ರಿ ಸುಮಾರು ಒಂಭತ್ತು ಗಂಟೆಯ ಹೊತ್ತಿಗೆ ನೀವೇ ಕರೆ ಮಾಡಿ ' ನಾನು ಇವತ್ತು ಇಲ್ಲೇ ಸ್ನೇಹಿತನ ಮನೆಯಲ್ಲಿ ಉಳಿದುಕೊಳ್ಳುತ್ತೇನೆ. ನಾಳೆ ಸಾಯಂಕಾಲದ ಹೊತ್ತಿಗೆ ಮನೆಗೆ ಬರುತ್ತೇನೆ' ಎಂದು ಹೇಳಿದ್ರಿ. ಬರುವಾಗ ..ಬರುವಾಗ .." ಮಾತನಾಡುತ್ತ ನಾಚಿದಳು ವತ್ಸಲಾ.
" ಅಮ್ಮ..ಮುಂದೇನಾಯಿತು ಹೇಳು. ನಾಚಿಕೆ ಯಾಕೋ ಸುಂದರಿಗೆ?"
"ಬರುವಾಗ ನನಗಾಗಿ ಮಲ್ಲಿಗೆ ಹೂವು ತೆಗೆದುಕೊಂಡು ಬಂದಿದ್ದರು. "
"ಅದನ್ನು ಹೇಳಲು ಇಷ್ಟೊಂದು ನಾಚಿಕೆಯಾ? ಅಪ್ಪ ಮಲ್ಲಿಗೆ ಹೂವನ್ನು ಯಾವಾಗಲೂ ನಿನಗೆ ತಂದು ಕೊಟ್ಟೆ ಇರಲಿಲ್ಲವಾ?"
ಮಗಳ ಮಾತಿಗೆ ತಲೆ ತಗ್ಗಿಸಿದಳು ವತ್ಸಲಾ.
" ಹೂಂ .. ಅರ್ಥವಾಯ್ತು ಬಿಡು. ಅಪ್ಪಾ..ನೀವು ಮುಂದುವರಿಸಿ. "
" ಆ ದಿನ ನಾನು ನನ್ನ ಸ್ನೇಹಿತನ ಒತ್ತಾಯದ ಮೇರೆಗೆ ಆತನ ಮನೆಯಲ್ಲೇ ಉಳಿದುಕೊಂಡೆ. ಆತನ ಮನೆಯಲ್ಲಿ ಆತನ ವಯಸ್ಸಾದ ತಾಯಿ, ಆತನ ಪತ್ನಿ, ಮಗ ಹಾಗೂ ಮಗಳು..ಇಷ್ಟು ಜನರು ವಾಸಿಸುತ್ತಾರೆ. ಆತ ಮಾಡುವುದು ನಾನು ಮಾಡುವ ತರಹದ್ದೇ ಕೆಲಸ. ನಾನು ಅಂದುಕೊಂಡ ಹಾಗೆ ಒತ್ತಡದ ಕೆಲಸ. ಮನೆಯಲ್ಲಿ ಮಗ ಅಪ್ಪ ಹೇಳುವ ಮಾತನ್ನು ಕೇಳುತ್ತಾ ಇರಲಿಲ್ಲ. ಆತನ ಪತ್ನಿ ಸಿಡಿ ಸಿಡಿ ಅಂತಿದ್ದಳು. ಮಗಳು ತನಗೆ ಅದು ಬೇಕು ಇದು ಬೇಕು ಎಂದು ಹಠ ಮಾಡುತ್ತಿದ್ದಳು. "
" ಆದರೂ ನನ್ನ ಸ್ನೇಹಿತ ಶಾಂತನಾಗಿದ್ದ. ನಾನು ಗಮನಿಸಿದ ಹಾಗೆ ಆತನ ಮನದಲ್ಲಿ ಈರ್ಷೆ, ಕೋಪ, ಅಹಂಕಾರ, ರೋಷ, ಆವೇಶ..ಯಾವುದು ಇರಲಿಲ್ಲ. ಒತ್ತಡದಲ್ಲಿದ್ದರೂ ಆತನ ಮಾತು ಸೌಮ್ಯವಾಗಿ , ನಯವಾಗಿ ಇರುತ್ತಿತ್ತು. ಆತ ಹಾಗಿರಲು ಹೇಗೆ ಸಾಧ್ಯ ಅಂದುಕೊಂಡೇ ಆ ದಿನ ನಿದ್ದೆಯಿಲ್ಲದ ರಾತ್ರಿಯನ್ನು ಕಳೆದೆ. ಮರುದಿನ ಭಾನುವಾರವಾಗಿದ್ದರಿಂದ ಸಮೀಪದಲ್ಲಿರುವ ಆತನ ಹೊಲ, ಗದ್ದೆಗಳನ್ನು ತೋರಿಸಿದ. ಮಧ್ಯಾಹ್ನ ಊಟ ಮಾಡಿದ ಮೇಲೆ ನನ್ನ ಕಾರಿನಲ್ಲಿ ನಾನು ನನ್ನ ಮನೆಗೆ ಹೊರಟೆ. ಆತನ ಅಮ್ಮನಿಗೆ ಅಲ್ಲೇ ಸಮೀಪದಲ್ಲಿ ದೇವಸ್ಥಾನದಲ್ಲಿ ನಡೆಯುತ್ತಿರುವ ಹರಿ ಕೀರ್ತನೆಗೆ ಹೋಗಬೇಕಾಗಿತ್ತು. ನಾನೂ ಸಹ ಅದೇ ದಾರಿಯಲ್ಲಿ ಪ್ರಯಾಣಿಸುತ್ತಿರುವುದರಿಂದ ಅವರನ್ನು ಆ ದೇವಸ್ಥಾನದ ಬಳಿ ಬಿಟ್ಟು ಹೋಗಲು ನನ್ನ ಸ್ನೇಹಿತ ವಿನಂತಿಸಿದ. "
" ಮೊದಲಿನಿಂದಲೂ ನನಗೆ ಇಂತಹ ಕೆಲಸಗಳು ಆಗಿ ಬರುತ್ತಿರಲಿಲ್ಲ. ಹಾಗೆ ಮಾಡಿದರೆ ನನ್ನ ಅಂತಸ್ತು ತಗ್ಗಿ ಹೋಗುತ್ತದೆ ಎನ್ನುವ ಭಾವ ನನ್ನದಾಗಿತ್ತು. ಸ್ನೇಹಿತನ ಮಾತನ್ನು ಮೀರಲಾರದೇ ಆತನ ಅಮ್ಮನನ್ನು ಅವರು ಹೇಳಿದ ಸ್ಥಳಕ್ಕೆ ಕರೆದುಕೊಂಡು ಹೋದೆ. "
ಇಷ್ಟು ಹೇಳಿ ತನ್ನ ಮಾತು ನಿಲ್ಲಿಸಿದ ಮಾಧವ.
"ಆಮೇಲೆ ಅಪ್ಪಾ.. "
"ಅಲ್ಲಿ ಅದಾಗಲೇ ಹರಿ ಕೀರ್ತನೆ ಆರಂಭವಾಗಿತ್ತು. ದಾಸರು ಹೇಳುತ್ತಿರುವ ಒಂದೆರಡು ವಾಕ್ಯ ನನ್ನ ಕಿವಿಗೆ ಬಿದ್ದಿತು. 'ಈ ದೇಹ ಒಂದು ಜಮೀನು ಇದ್ದ ಹಾಗೆ.ಕಾಮ, ಕ್ರೋಧ, ಲೋಭ, ಈರ್ಷೆ, ಉದ್ಧಟತನ, ಅಹಂ. ಕೋಪ , ತಾಪ.. ಇವೆಲ್ಲ ಕಳೆಗಳು. ಬೆಲೆ ಬರಬೇಕಾದರೆ ಕಳೆಗಳನ್ನು ಸಂಪೂರ್ಣ ಕಿತ್ತು ನಾಶವಾಗಿಸಬೇಕು' "
"ನಾನು ಅಲ್ಲಿಂದ ಹೊರಟೆ. ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಬರಬೇಕಾದರೆ ಮಧ್ಯದಲ್ಲಿ ಕಾರು ಬಿಸಿಯಾಗಿ ರೇಡಿಯೇಟರ್ ದಿಂದ ಹೊಗೆ ಬರಲು ಆರಂಭವಾಯಿತು. ಕಾರಿನಲ್ಲಿರುವ ನೀರಿನ ಬಾಟಲಿಗಾಗಿ ಹುಡುಕಾಡಿದೆ. ಬಾಟಲಿಯಲ್ಲಿರುವ ನೀರು ಖಾಲಿಯಾಗಿತ್ತು. ಅಲ್ಲೇ ರಸ್ತೆಯ ಪಕ್ಕಕ್ಕೆ ಕಾರು ನಿಲ್ಲಿಸಿದೆ. ಅಲ್ಲೇಲ್ಲಾದರೂ ನೀರು ಸಿಗಬಹುದು ಎಂದು ಖಾಲಿ ಬಾಟಲಿಯನ್ನು ಹಿಡಿದು ಕೆಳಗಿಳಿದೆ. ಅಲ್ಲೊಬ್ಬ ರೈತ ಹೊಲದ ಪಕ್ಕದಲ್ಲಿ ನಿಂತಿದ್ದ. ನಾನು ಆತನ ಹತ್ತಿರ ನೀರಿನ ಬಗ್ಗೆ ವಿಚಾರಿಸಿದೆ. ಹತ್ತಿರದಲ್ಲೇ ಒಂದು ಬೋರ್ ವೆಲ್ ಇದೆ. ನಾನು ನಿಮಗೆ ನೀರು ತಂದುಕೊಡುತ್ತೇನೆ ಎಂದು ಹೇಳಿ ಆತ ಆಚೆ ನಡೆದ. ಕೆಲವೇ ಕ್ಷಣಗಳಲ್ಲಿ ಆತ ನೀರು ತುಂಬಿದ ಬಾಟಲಿಯನ್ನು ತಂದುಕೊಟ್ಟ. ನಾನು ಅಲ್ಲೇ ಪಕ್ಕದಲ್ಲಿರುವ ಹೊಲವನ್ನೇ ತದೇಕ ದೃಷ್ಟಿಯಿಂದ ನೋಡುತ್ತಿದ್ದೆ.”
“ಸ್ವಾಮಿ, ಏನು ನೋಡ್ತಾ ಇದ್ದೀರಾ” ಎಂದು ಆತ ಕೇಳಿದ.
"ಅಲ್ಲಾ.. ಇಲ್ಲೇ ಅಕ್ಕ ಪಕ್ಕದಲ್ಲಿರುವ ಎರಡು ಪುಟ್ಟ ಗದ್ದೆಗಳಲ್ಲಿ ಜೋಳವನ್ನು ಬೆಳೆದಿದ್ದಾರೆ. ಒಂದು ಭಾಗದ ಗದ್ದೆಯಲ್ಲಿ ಜೋಳದ ತೆನೆ ಗೊಂಚಲು ಗೊಂಚಲಾಗಿ ನಳ ನಳಿಸುತ್ತಿದೆ. ಆದರೆ ಮತ್ತೊಂದು ಭಾಗದಲ್ಲಿ ಜೋಳದ ಗೊಂಚಲು ಅಲ್ಲಲ್ಲಿ ಮಾತ್ರ ಕಾಣ ಸಿಗುತ್ತದೆ. " ಎಂದು ಆತನಲ್ಲಿ ಕೇಳಿದೆ.
"ಒಹ್..ಅದಾ? ಒಂದು ಹೊಲದಲ್ಲಿ ಬೆಳೆ ಬೆಳೆಸಿರುವ ಸುತ್ತ ಮುತ್ತಲೂ ಇರುವ ಬೇಡವಾದ ಕಳೆಗಳನ್ನು ಕಿತ್ತು ಹಾಕಿದ್ದಾರೆ. ಅದೇ ಪಕ್ಕದ ಭಾಗದಲ್ಲಿ ಬೇಡವಾದ ಕಳೆಗಳನ್ನು ಕಿತ್ತು ಹಾಕುವ ಸಾಹಸಕ್ಕೇ ಕೈ ಹಾಕಲಿಲ್ಲ. ಅದೇ ಅವೆರಡಕ್ಕೂ ಇರುವ ವ್ಯತ್ಯಾಸ. ಈ ಭೂಮಿಯೂ ಹಾಗೆಯೇ ಅಲ್ಲವಾ? ಈ ಶರೀರದ ಹಾಗೆ. ಬೇಡವಾದದ್ದನ್ನು ಹೊರಗಡೆ ಹಾಕಿದರೆ ಮಾತ್ರ ಉತ್ತಮ ಬೆಳೆ. ಇಲ್ಲವಾದರೆ ಇಲ್ಲ. "
ನಾನು ಅಲ್ಲಿಂದ ಹೊರಟು ಬಂದೆ.ಆ ಹರಿದಾಸರ ಮಾತು ಜೊತೆಗೆ ಆ ರೈತನ ಮಾತು ಎರಡನ್ನೂ ತುಲನೆ ಮಾಡುತ್ತಾ ಬಂದೆ. ಒಬ್ಬರು ದೇಹವನ್ನು ಜಮೀನಿಗೆ ಹೋಲಿಸಿದ್ದರು. ಇನ್ನೊಬ್ಬರು ಜಮೀನನ್ನು ಶರೀರಕ್ಕೆ ಹೋಲಿಸಿದ್ದರು. ಆದರೆ ಅವರಿಬ್ಬರ ನೀತಿ ಒಂದೇ ಆಗಿತ್ತು. ಜಮೀನಿನ ಕಳೆ ಎಂದರೆ ಬಿತ್ತಿದ ಬೆಳೆ ಬಿಟ್ಟು ಅಲ್ಲಿ ಬೆಳೆದ ಬೇಡವಾದ ಸಸ್ಯಗಳು. ಶರೀರದ ಕಳೆ ಎಂದರೆ ಕಾಮ, ಕ್ರೋಧ, ಈರ್ಷೆ,...ಇವೆಲ್ಲ.”
"ಈ ಘಟನೆ ನಡೆದಾಗಿನಿಂದ ನಾನು ನನ್ನನ್ನು ಬದಲಾಯಿಸಿಕೊಳ್ಳಲು ಪ್ರಯತ್ನ ಮಾಡುತ್ತಲೇ ಇದ್ದೇನೆ. ಕೆಲವೊಮ್ಮೆ ಆ ದುಷ್ಟ ಕಳೆಗಳಿಂದ ಹೊರ ಬರಲು ಆಗದೆ ಒದ್ದಾಡುತ್ತೇನೆ. ಆಗ ಒಮ್ಮೆ ಹೊರಗೆ ಹೋಗಿ ಆ ಜಮೀನಿನಲ್ಲಿ ಬೆಳೆದ ಕಳೆ ರಹಿತ ಬೆಳೆಯನ್ನು ಕಣ್ತುಂಬಿಕೊಂಡು ಬರುತ್ತೇನೆ. "ವತ್ಸಲಾ..ಇಷ್ಟು ವರ್ಷದ ನನ್ನ ನಡವಳಿಕೆಗಳಿಂದ ನೀನುಷ್ಟು ಸಂಕಟ ಅನುಭವಿಸಿದ್ದೀಯಾ ಎಂದು ನನಗೆ ಈಗ ಅರಿವಾಗಿದೆ. ನನ್ನನ್ನು ಕ್ಷಮಿಸುತ್ತೀಯಾ?"
"ನೀವು ಈಗ ಬದಲಾಗಿದ್ದೀರಿ. ಅದೇ ನನಗೆ ಸಂಭ್ರಮ. ಕ್ಷಮೆ ಕೇಳುತ್ತೇನೆ ಎನ್ನುವ ಮಾತನು ನನ್ನ ಮುಂದೆ ಆಡಬೇಡಿ ' ವತ್ಸಲಾ ಮೃದುವಾಗಿ ನುಡಿದಳು.
"ಅಪ್ಪಾ..ಈ ನಿಮ್ಮ ಪರಿವರ್ತನೆಯ ನಡತೆಯಿಂದ ನನಗೆ ತುಂಬಾ ಖುಷಿಯಾಯಿತು. ಅಮ್ಮನೂ ಮಾನಸಿಕ ಅಸಮತೋಲನದಿಂದ ಹೊರಗೆ ಬಂದಿದ್ದಾಳೆ. ನಿಮ್ಮಿಬ್ಬರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ನಾನು ನನ್ನ ಬದುಕಿನಲ್ಲಿ ಎಷ್ಟೇ ಖುಷಿಯಾಗಿದ್ದರೂ ನಿಮ್ಮಿಬ್ಬರನ್ನು ನೆನಪಿಸಿಕೊಂಡರೆ ತುಂಬಾ ಬೇಸರವಾಗುತ್ತಿತ್ತು.. ಇದಕ್ಕಿಂತ ಬೇರೆ ಸಂತೋಷ ನನಗೆ ಬೇಕಾ??”
ತನ್ನ ಮುದ್ದಿನ ಅಪ್ಪ ಅಮ್ಮಂದಿರನ್ನು ಪ್ರೀತಿಯಿಂದ ತಬ್ಬಿಕೊಂಡಳು ಮಧು.
ಲೇಖಕರು:ಗೀತಾ ಹೆಬ್ಬಾರ್
ಸಂಗ್ರಹ: ವೀರೇಶ್ ಅರಸೀಕೆರೆ.
Comments
Post a Comment