ದಿನಕ್ಕೊಂದು ಕಥೆ 1120
*🌻ದಿನಕ್ಕೊಂದು ಕಥೆ🌻*
*ಭಾರತದ ಆಧ್ಯಾತ್ಮಿಕ ಶಕ್ತಿ.*
ಇಡೀ ಪ್ರಪಂಚವನ್ನೇ ಗೆಲ್ಲಬೇಕೆಂಬ ಉದ್ದೇಶದಿಂದ, ಅಲೆಕ್ಸಾಂಡರ್ ತನ್ನ ಅಪಾರವಾದ ಸೈನ್ಯದೊಂದಿಗೆ ಹೊರಟ. ಎಷ್ಟೋ ದೇಶಗಳು ಇವನಿಗೆ ಶರಣಾದವು, ಇದರಿಂದ ಬರುಬರುತ್ತಾ ಇವನಿಗೆ ಅಹಂಕಾರ ಹೆಚ್ಚಾಗುತ್ತಾ ಹೋಯಿತು.
ಈ ಬಾರಿ ಭಾರತದ ಮೇಲೆ ದಾಳಿ ಮಾಡಬೇಕೆಂದುಕೊಂಡು ಹೊರಟ. ಹೊರಡುವಾಗ ಒಮ್ಮೆ ತನ್ನ ಗುರು ಅರಿಸ್ಟಾಟಲ್ ನನ್ನು ಭೇಟಿಯಾಗಲು ಬಂದ. ಅರಿಸ್ಟಾಟಲ್ ಮಹಾಜ್ಞಾನಿ, ಅವನಿಗೆ ಭಾರತದ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ಪರಿಚಯವಿತ್ತು. ಅಲೆಕ್ಸಾಂಡರ್ ಗುರುಗಳೇ, ನಾನು ಭಾರತದ ಮೇಲೆ ದಾಳಿ ಮಾಡಲು ಹೋಗುತ್ತಿದ್ದೇನೆ, ಬರುವಾಗ ನಿಮಗೆ ಅಲ್ಲಿಂದ ಏನನ್ನು ತರಲಿ? ಎಂದು ಕೇಳಿದ.
ಆಗ ಅರಿಸ್ಟಾಟಲ್ ನಗುತ್ತಾ, ಭಾರತವನ್ನು ಗೆಲ್ಲಬೇಕೆಂಬ ಆಸೆ ನಿನಗೇಕೆ? ಆ ದೇಶವನ್ನು ಗೆಲ್ಲುವುದು ಅಷ್ಟು ಸುಲಭವಲ್ಲ, ನೀನು ಕೆಲವು ರಾಜರುಗಳನ್ನು ಗೆಲ್ಲಬಹುದು, ಒಂದಿಷ್ಟು ಸಂಪತ್ತನ್ನೂ ಪಡೆಯಬಹುದು, ಆದರೆ ಅದ್ಯಾವುದೂ ಭಾರತವಲ್ಲ. ಭಾರತದ ನಿಜವಾದ ಶಕ್ತಿ ಇರುವುದು ಆಧ್ಯಾತ್ಮದಲ್ಲಿ, ನಿನಗೆ ಸಾಧ್ಯವಾದರೆ ಭಾರತದಿಂದ ಒಬ್ಬ ಋಷಿಯನ್ನೊ, ಅಥವಾ ಒಬ್ಬ ಸಾಧಕರನ್ನೊ ಕರೆದು ತಾ ,ಅದರಿಂದ ಎಲ್ಲರಿಗೂ ಪ್ರಯೋಜನವಿದೆ ಎಂದು ಹೇಳಿದರು.
ಅಲೆಕ್ಸಾಂಡರ್ ಗುರುಗಳಿಗೆ ನಮಸ್ಕರಿಸಿ,ಅಲ್ಲಿಂದ ಹೊರಟು, ತನ್ನ ಯುದ್ಧ ಯಾತ್ರೆಯನ್ನು ಆರಂಭಿಸಿದ. ತನ್ನ ಕಡೆಯವರಿಗೆ, ಗುರುಗಳು ಹೇಳಿದಂತ ದಾರ್ಶನಿಕರನ್ನು ಹುಡುಕಲು ಹೇಳಿದ. ಒಂದು ದಿನ ಅವನ ಕಡೆಯವರು ಬಂದು, ಊರ ಹೊರಗಿನ ಆಶ್ರಮದಲ್ಲಿ, ನಿಮ್ಮ ಗುರುಗಳು ಹೇಳಿದಂತಾ ವ್ಯಕ್ತಿಯೊಬ್ಬರು ಇರುವುದಾಗಿ ಹೇಳಿದರು. ಆಗ ಅಲೆಕ್ಸಾಂಡರ್," ಆ ವ್ಯಕ್ತಿಗೆ ಏನು ಬೇಕೋ ಅದೆಲ್ಲವನ್ನು ಕೊಟ್ಟುಬಿಡಿ, ನನ್ನ ಅಪ್ಪಣೆಯ ಅವಶ್ಯಕತೆ ಇಲ್ಲ, ಎಷ್ಟೇ ಸಂಪತ್ತು ಖರ್ಚಾದರೂ ಚಿಂತೆ ಇಲ್ಲ" ಅವರನ್ನು ಇಲ್ಲಿಂದ ನಮ್ಮಲ್ಲಿಗೆ ಕರೆದುಕೊಂಡು ಹೋಗೋಣ,ಎಂದು ಹೇಳಿದ.
ಒಂದು ವಾರದ ನಂತರ, ಅಲೆಕ್ಸಾಂಡರ್ ನ ಮಂತ್ರಿ ಬಂದು, ನಾವು ಎಷ್ಟೇ ಪ್ರಯತ್ನಿಸಿದರೂ, ಆ ಸನ್ಯಾಸಿ ನಮ್ಮ ಯಾವ ಮಾತಿಗೂ, ಆಸೆಗೂ , ಒಪ್ಪುತ್ತಿಲ್ಲವೆಂದು, ತಿಳಿಸಿದ .
ಅಲೆಕ್ಸಾಂಡರ್ನಿಗೆ ಈಗ ಕೋಪ ಬಂತು, ತನ್ನಂತಹ ಚಕ್ರವರ್ತಿಯ ಮಾತನ್ನು ಮೀರಿದ ಈ ಸನ್ಯಾಸಿಯ ಅಹಂಕಾರ ಎಷ್ಟಿರಬಹುದು? ಎಂದುಕೊಂಡು ತಾನೇ ಅವರಿದ್ದ ಆಶ್ರಮದ ಕಡೆಗೆ ಬಂದ.
ಒಂದು ಮರದ ಬುಡದಲ್ಲಿ ಆ ಸನ್ಯಾಸಿ, ಧ್ಯಾನಕ್ಕೆ ಕುಳಿತಿದ್ದರು. ಆಗಸ್ಟೇ ಸೂರ್ಯೋದಯವಾಗುತ್ತಿತ್ತು. ಸನ್ಯಾಸಿ ಸೂರ್ಯನಿಗೆ ಮುಖ ಮಾಡಿ ಕುಳಿತಿದ್ದರು. ಅವರ ಮುಖದ ಅಪೂರ್ವವಾದ ಕಾಂತಿ, ತೇಜಸ್ಸು, ಅಲೆಕ್ಸಾಂಡರ್ ನನ್ನು ತಲೆತಗ್ಗಿಸುವಂತೆ ಮಾಡಿತು. ಆತ ನಿಧಾನವಾಗಿ, ಸ್ವಾಮಿ, ಮಹಾತ್ಮರೆ ತಾವು ದಯಮಾಡಿ ನನ್ನೊಡನೆ ನನ್ನ ದೇಶಕ್ಕೆ ಬರಬೇಕು. ತಮ್ಮ ದಿವ್ಯ ಚಿಂತನೆಯ ಬೆಳಕನ್ನು ನಮ್ಮ ಜನರಿಗೂ ನೀಡಬೇಕು, ಎಂದು ದೈನ್ಯದಿಂದ ಕೇಳಿಕೊಂಡ.
ನಿಮ್ಮ ಆಮಂತ್ರಣಕ್ಕೆ ಧನ್ಯವಾದಗಳು, ಆದರೆ ನಾನು ಈ ಪುಣ್ಯಭೂಮಿಯನ್ನು ಬಿಟ್ಟು ಎಲ್ಲಿಗೂ ಬರಲಾರೆ, ಎಂದರು ಸನ್ಯಾಸಿ.
ಅಲೆಕ್ಸಾಂಡರ್ ನಿಗೆ, ಇಲ್ಲಾ,ಎಂಬ ಉತ್ತರವನ್ನು ಕೇಳಿಯೇ ಅಭ್ಯಾಸವಿಲ್ಲ, ತಾನು ತಂದಿದ್ದ ಮುತ್ತು ರತ್ನಗಳ ರಾಶಿಯನ್ನು ಅವರ ಮುಂದೆ ಸುರಿದು, ಸ್ವಾಮಿಗಳೇ, ಇದೆಲ್ಲಾ ನಿಮ್ಮದೇ, ಇಷ್ಟೇ ಅಲ್ಲಾ ತಾವು ಏನು ಅಪೇಕ್ಷೆ ಪಡುತ್ತಿರೋ ಅದೆಲ್ಲವನ್ನು ನಾನು ನಿಮಗೆ ನೀಡುತ್ತೇನೆ, ಎಂದು ಹೇಳಿದ, ಅಲೆಕ್ಸಾಂಡರ್.
ಈಗ ಸನ್ಯಾಸಿಯ ಮುಖದಲ್ಲಿ, ನೆರಿಗೆಗಳು ಮೂಡಿದವು, ಕಣ್ಣು ಕೆಂಪಾದವು," ದಯವಿಟ್ಟು ನನ್ನ ಆಶ್ರಮದಲ್ಲಿ ಈ ಕೊಳಕನ್ನು ಹಾಕಿ ಅಪವಿತ್ರ ಮಾಡಬೇಡಾ, ಇದನ್ನೆಲ್ಲಾ ಈ ಕ್ಷಣದಲ್ಲೇ ತೆಗೆದುಕೊಂಡು ಇಲ್ಲಿಂದ ಹೊರಡು" ಎಂದು ಗದರಿದರು ಸನ್ಯಾಸಿಗಳು.
ಈಗ ಚಕ್ರವರ್ತಿಗೂ ಕೋಪ ಉಕ್ಕಿ ಬಂದಿತು, ನೀವು ಯಾರೊಂದಿಗೆ ಮಾತನಾಡುತ್ತಿದ್ದೀರಿ ಎಂಬ ಎಚ್ಚರ ನಿಮಗಿದೆಯೇ? ನಾನು ,ಸಾಮ್ರಾಟ್ ಅಲೆಕ್ಸಾಂಡರ್ ಚಕ್ರವರ್ತಿ, ನಿಮ್ಮ ಈ ಉದ್ಧಟತನದ ಮಾತಿಗೆ ಏನು ಶಿಕ್ಷೆಕೊಡಬಹುದೆಂಬ ಕಲ್ಪನೆ ಕೂಡಾ ನಿಮಗಿದೆಯೇ? ಎಂದು ಕೋಪದಿಂದ ಹೇಳಿದ.
ಆಗ ಸನ್ಯಾಸಿ, ಅಯ್ಯೋ ಮಗೂ, ನನ್ನನ್ಯಾಕೆ ಹೆದರಿಸಲು ನೋಡುತ್ತೀಯಾ? ನೀನು, ಹೆಚ್ಚೆಂದರೆ, ಏನು ತಾನೆ ಮಾಡಬಹುದು? ಈ ದೇಹವನ್ನು ನಾಶ ಮಾಡಬಹುದು! ಅದು ಬಂದಿರುವುದೇ ನಾಶವಾಗಲು, ಆದರೆ ಒಳಗಿನ ಆತ್ಮವನ್ನು ನಿನ್ನಿಂದ ಮುಟ್ಟಲೂ ಸಾಧ್ಯವಿಲ್ಲ, ನಿನ್ನ ಕೆಲಸ ನೋಡಿಕೊಂಡು, ಮೊದಲು ಇಲ್ಲಿಂದ ಹೊರಡು, ಆಶ್ರಮದ ಶಾಂತಿಗೆ ಭಂಗ ತರ ಬೇಡ, ಎಂದರು .
ಅಲೆಕ್ಸಾಂಡರ್ ಸಪ್ಪಗಾದ, ಹಾಗೂ ಅವನಿಗೆ ಅರ್ಥವಾಯಿತು", ತಾನು ಐಹಿಕ ಭೋಗದ ವಸ್ತುಗಳನ್ನು ಗೆಲ್ಲಬಹುದು, ಆದರೆ ಆಧ್ಯಾತ್ಮಿಕ ಸತ್ಯವನ್ನು ಅರಿಯುವುದು ಸಾಧ್ಯವಿಲ್ಲವೆಂದು."
ಆತ ಬಹಳ ನಮ್ರತೆಯಿಂದ, ಗುರುಗಳೇ ನನ್ನೊಂದಿಗೆ ಬರುವುದು ಬೇಡ, ನನ್ನಿಂದ ಯಾವುದಾದರೂ ಸೇವೆಗೆ ಅವಕಾಶವಿದೆಯೇ? ಎಂದು ಕೇಳಿದ .
ಸನ್ಯಾಸಿಗಳು ನಕ್ಕು, ನನಗೆ ಯಾವ ಸೇವೆಯೂ ಬೇಕಿಲ್ಲ, ನೀನು ಏನಾದರೂ ಸೇವೆ ಮಾಡುವುದೇ ಆದರೆ, ದಯವಿಟ್ಟು ನನ್ನ ಎದುರಿನಿಂದ ಪಕ್ಕಕ್ಕೆ ಸರಿದು ಬಿಡು, ನೀನು ನನ್ನ ಮೇಲೆ ಬೀಳುತ್ತಿರುವ ಸೂರ್ಯನ ಕಿರಣಗಳಿಗೆ ಅಡ್ಡಲಾಗಿ ನಿಂತಿರುವೆ" ಎಂದರು.
ಅಲೆಕ್ಸಾಂಡರ್ ಅಲ್ಲಿಂದ ಸರಿದು ಹೋದ.
ಇದೇ ನಮ್ಮ ದೇಶದ ಹಿಂದಿನ, ದಾರ್ಶನಿಕರು, ಕಂಡುಕೊಂಡಿದ್ದ ಸತ್ಯ. ಅವರು ಶಾಶ್ವತವಾದ ಆಧ್ಯಾತ್ಮಿಕ ಸತ್ಯದ ಹುಡುಕಾಟದಲ್ಲಿ , ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಿದ್ದರು. ಅವರು ದಿನನಿತ್ಯದ, ಐಹಿಕ ಅವಶ್ಯಕತೆಗಳ ಮಿತಿಯಲ್ಲಿರುತ್ತಿದ್ದರು. ಸಾವಿಗೆ ಕೂಡ ಅಂಜದೇ, ಶಾಶ್ವತವಾದ ಆಧ್ಯಾತ್ಮಿಕ ಹಾಗೂ ಸತ್ಯದ ಹುಡುಕಾಟದಲ್ಲಿ, ತೊಡಗುವುದೇ ಅವರ ಮುಖ್ಯ ಗುರಿಯಾಗಿತ್ತು.
ಕೃಪೆ:ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment