ದಿನಕ್ಕೊಂದು ಕಥೆ 1121

*🌻ದಿನಕ್ಕೊಂದು ಕಥೆ🌻*
*ಮಾಡಿದ ತಪ್ಪಿಗೆ, ಪಶ್ಚಾತಾಪವೇ, ಪ್ರಾಯಶ್ಚಿತ.*

 ಬುದ್ಧರು ,ತಮ್ಮ ಮಾತು ,ಮತ್ತು ಒಳ್ಳೆಯ ನಡವಳಿಕೆಯಿಂದ  ಅಪಾರವಾದ ಶಿಷ್ಯ ವೃಂದವನ್ನು ಹೊಂದಿದ್ದರು. ಹಾಗಂತ ಅವರಿಗೆ ಯಾರೂ  ಶತ್ರುಗಳೇ ಇರಲಿಲ್ಲವೆಂದೇನಲ್ಲ, ಅವರ ಪ್ರಗತಿಯನ್ನು ಕಂಡು ಸಹಿಸಲಾಗದೇ, ಅಸೂಯೆ ಪಡುವಂತ ಅನೇಕ ಜನರೂ ಇದ್ದರು. ಅವರಲ್ಲಿ ದೇವ ದತ್ತ ಕೂಡ ಒಬ್ಬ. ಇವನು ಬುದ್ಧರ  ಸಂಬಂಧಿ ,ಹಾಗೂ ಶಿಷ್ಯ ಕೂಡಾ. ಬಾಲ್ಯದಿಂದಲೇ ಬುದ್ದನ ಜೊತೆಗೆ ಬೆಳೆದ ಇವನಲ್ಲಿ, ಬುದ್ಧನನ್ನು ಕಂಡರೆ ಒಳಗೊಳಗೆ ದ್ವೇಷ ,ಸಿಟ್ಟು, ಹೊಟ್ಟೆಕಿಚ್ಚು.ಅದು ದಿನದಿನವೂ ಜಾಸ್ತಿಯಾಗುತ್ತಲೇ ಹೋಯಿತು. ಬುದ್ಧರು ಕಟ್ಟಿದ ಸಂಘಕ್ಕೆ ಅವರನ್ನು ಸರಿಸಿ ತಾನೇ ಅಧಿಪತಿಯಾಗಬೇಕೆಂಬ ಆಸೆ ಕೂಡ ಇವನಲ್ಲಿ ಬಲವಾಗಿತ್ತು. 

     ‌ ಒಂದು ದಿನ ಸಭೆಯಲ್ಲಿ ಎಲ್ಲರೆದುರಿನಲ್ಲೇ ಈತ  ,ಬುದ್ಧರನ್ನು ಉದ್ದೇಶಿಸಿ, ನಿಮಗೆ ವಯಸ್ಸಾಗುತ್ತಿದೆ, ತಾವು ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ, ನಾನು  ನಿಮ್ಮ ಸ್ಥಾನವನ್ನು ನಿಭಾಯಿಸುತ್ತೇನೆ ಎಂದು ಹೇಳಿದ.
   ಇವನ ಮಾತಿನಂತೆ, ತಾವೇನಾದರೂ  ವಿಶ್ರಾಂತಿಗೆ ಸರಿದು,ತಮ್ಮ ಸ್ಥಾನವನ್ನು ಇವನಿಗೆ  ಕೊಟ್ಟರೆ, ತಾವು ಕಷ್ಟಪಟ್ಟು ಕಟ್ಟಿದ ಸತ್ಸಂಗವು ನಾಶವಾಗುತ್ತದೆ ಎಂಬುದು ಬುದ್ದರಿಗೆ ತಿಳಿದಿತ್ತು. ಹಾಗಾಗಿ ಅವರು ಬಹಳ ನಾಜೂಕಿನಿಂದ ತಿರಸ್ಕರಿಸಿದರು.

 ಇದರಿಂದ ಕೋಪಗೊಂಡ ದೇವದತ್ತ, ಬುದ್ಧರನ್ನು ಮುಗಿಸಿ ಬಿಡುವ ಹುನ್ನಾರ ನೆಡೆಸಿದ. ಬಿಂಬಸಾರನ ಮಗನಾದ ಅಜಾತಶತ್ರುವಿನ ಬಳಿಗೆ ಹೋಗಿ,  ನೀನು ನಿನ್ನ ತಂದೆಯನ್ನು ಕೊಂದು  ನೀನು ರಾಜನಾಗು, ಎಂದು ಅವನನ್ನು ಹುರಿದುಂಬಿಸಿ, ನನಗೆ  ಬುದ್ಧನನ್ನು ಮುಗಿಸಲು ‌ಸಹಾಯಮಾಡು, ನಾನೇ ಬುದ್ಧನಾಗುತ್ತೇನೆ ಎಂದು ಅವನಲ್ಲಿ ಕೇಳಿಕೊಂಡ.

    ಅಜಾತಶತ್ರು ಇವನ ಮಾತನ್ನು ಒಪ್ಪಿಕೊಂಡು, ತನ್ನ ತಂದೆಯನ್ನು ಸೆರೆಯಲ್ಲಿಟ್ಟು ಕೊಂದುಹಾಕಿ, ತಾನೇ ರಾಜನಾದ. ಈಗ  ದೇವದತ್ತ ಅಜಾತಶತ್ರುವಿನ ಸಹಾಯದಿಂದ, ಬುದ್ಧನನ್ನು ಕೊಲ್ಲಲು, ಹದಿನಾರು ಜನ ಕೊಲೆಗಡುಕರನ್ನು  ಅವರಲ್ಲಿಗೆ ಕಳುಹಿಸಿದ. 
  ‌
    ಆದರೆ, ಆ ಕೊಲೆಗಡುಕರು, ಬುದ್ಧನನ್ನು ಕೊಲ್ಲುವುದರ ಬದಲು, ಬುದ್ಧನ ಪ್ರೇಮದ ,ಶಾಂತಿಯ ನೆಡವಳಿಕೆಯಿಂದ ,ಬೋಧನೆಯಿಂದ ಪ್ರಭಾವಿತರಾಗಿ  ಬುದ್ಧನಿಗೆ ಶರಣಾಗಿ ಹೋದರು.

   ಆದರೂ ಬಿಡದೇ, ದೇವದತ್ತ,  ಇನ್ನೊಂದು ಸಲ , ಮದುವೇರಿದ ಆನೆಗೆ ಮತ್ತು ಬರಿಸುವಂತ  ಔಷಧ ವನ್ನು  ಕುಡಿಸಿ, ಬುಧ್ಧರ ಬಳಿ  ಅದನ್ನು ನುಗ್ಗಿಸಿದ. ಇತರ ಭಿಕ್ಷುಗಳ ಸಹಾಯದಿಂದ ಬುದ್ಧ ಅದರಿಂದಲೂ ಪಾರಾದರು. 
    
   ನಂತರ ದೇವದತ್ತ ಸಂಘದ ಒಳಗೇ ಇದ್ದುಕೊಂಡು, ಬುದ್ಧರ ಕೆಲವು ಭಿಕ್ಷುಗಳಿಗೆ ಇವರ ಬಗ್ಗೆ ಇಲ್ಲಸಲ್ಲದ್ದನೆಲ್ಲಾ ಹೇಳಿ, ಅವರನ್ನು ಇವರ ವಿರುದ್ಧ ಎತ್ತಿ ಕಟ್ಟಿದ. ಆಗ ಅವರೆಲ್ಲಾ,  ಸ್ವಲ್ಪದಿನ ದೇವದತ್ತನ ಅನುಯಾಯಿಗಳಾದರು. ಸಂಘವು ಒಡೆದು  ಇಬ್ಭಾಗ ವಾಯಿತು.
   ಬುದ್ಧರು ಇದರಿಂದ ಧೃತಿಗೆಡಲಿಲ್ಲ. ಎಲ್ಲದಕ್ಕೂ ಸಮಯವೇ ಉತ್ತರ ಕೊಡುವುದೆಂದು ಸುಮ್ಮನಿದ್ದರು .

  ಸ್ವಲ್ಪ ಸಮಯದ ನಂತರ ದೇವದತ್ತನ  ಅನುಯಾಯಿಗಳಾಗಿದ್ದವರಿಗೆ, ತಮ್ಮ ತಪ್ಪಿನ ಅರಿವಾಗಿ , ದೇವದತ್ತನನ್ನು ಬಿಟ್ಟು,  ಎಲ್ಲರೂ ಬುದ್ಧರ ಬಳಿಗೇ  ತಿರುಗಿ  ಬಂದರು. ಬುದ್ದರು ಏನೂ ಹೇಳದೆ, ಅವರನ್ನೆಲ್ಲಾ ಕ್ಷಮಿಸಿದರು.

 ಒಂದು ದಿನ ದೇವದತ್ತನೂ  ಬುಧ್ಧರ ಬಳಿಗೆ ಬಂದು, ತನ್ನ ತಪ್ಪನ್ನು ಮನ್ನಿಸಬೇಕೆಂದು  ಬೇಡಿಕೊಂಡ. ಬುದ್ಧರು ಅವನನ್ನೂ ಕೂಡಾ ಕ್ಷಮಿಸಿದರು.

     ಒಂದು ಸಲ, ಅಜಾತಶತ್ರುವಿನ ಮಗುವಿನ ಕೈ ಬೆರಳಿಗೆ ಹುಣ್ಣಾಗಿತ್ತು. ಮಗು ನೋವಿನಿಂದ ಬಹಳವಾಗಿ  ನರಳುತ್ತಿತ್ತು. ಆ ಮಗುವನ್ನು, ಅಜಾತಶತ್ರು ಬಹಳವಾಗಿ ಸಮಾಧಾನಪಡಿಸುತ್ತಿದ್ದ. ಇದನ್ನು ನೋಡಿದ ಅಜಾತಶತ್ರುವಿನ ತಾಯಿ," ನಿನ್ನ ತಂದೆಯೂ ಕೂಡ , ನೀನು ಸಣ್ಣವನಿದ್ದಾಗ ನಿನ್ನನ್ನು ಇದೇ ರೀತಿಯಲ್ಲಿ ಸಮಾಧಾನದಿಂದ ಮುದ್ದಿಸುತ್ತಿದ್ದ," ಎಂದು ಹೇಳಿ ಕಣ್ಣೀರು ಒರೆಸಿಕೊಂಡಳು.

   ‌ ಇದನ್ನು ಕೇಳಿದ ಅಜಾತಶತ್ರುವಿಗೆ ಬಹಳ ದುಃಖವಾಯಿತು.  ಪಶ್ಚಾತ್ತಾಪದಿಂದ ಅವನಿಗೆ,ಕಣ್ಣೀರು ತಡೆಯಲಾಗಲಿಲ್ಲ.  ದುಃಖ ಉಕ್ಕಿ ಬರತೊಡಗಿತು. ತಾನು ಎಂತ ದೊಡ್ಡ ತಪ್ಪು ಮಾಡಿದ್ದೇನೆ ಎಂದು ಅವನಿಗೆ ತನ್ನ ಬಗೆಯೇ ಹೇಸಿಗೆ ಎನಿಸಿತು.  ತಾನು ಮಾಡಿದ ತಪ್ಪಿನಿಂದ ಅವನ ಮನಸ್ಸು ಬಹಳವಾಗಿ  ನೊಂದುಕೊಂಡಿತು.  ನೆಮ್ಮದಿಗಾಗಿ,  ಬುದ್ಧನನ್ನು ಹುಡುಕಿಕೊಂಡು ಬಂದ. 

     ಆಗ ಬುದ್ಧರು , ಅವನಲ್ಲಿ ಸಮಾಧಾನದಿಂದ ಮಾತನಾಡಿ, ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದೇ, ನಿಜವಾದ ಪ್ರಾಯಶ್ಚಿತ್ತ. ನಿನ್ನ ಮನಸ್ಸನ್ನು ನಿನ್ನ ಸ್ಥಿಮಿತದಲ್ಲಿ ಇಟ್ಟುಕೊಂಡರೆ, ಮತ್ತೆಂದೂ ನೀನು ಇಂತಹ ಪಾಪ ಕೃತ್ಯಗಳನ್ನು ಎಸೆಗುವುದಿಲ್ಲ. ಇನ್ನಮೇಲಾದರೂ ಸರ್ವರಿಗೂ ಒಳಿತಾಗುವಂತ ಕೆಲಸಗಳನ್ನು ಹುಡುಕಿಕೊಂಡು ಮಾಡುತ್ತಾ ಹೋಗು,  ನಿನ್ನ ಬಗೆ ಅವರೆಲ್ಲರ  ಪ್ರೀತಿ ವಿಶ್ವಾಸದಿಂದ , ನಿನ್ನ ಮನಸ್ಸಲ್ಲಿ  ಮತ್ತೆ ಶಾಂತಿ ನೆಮ್ಮದಿ ಉಂಟಾಗುತ್ತದೆ, ಎಂದು ಶಾಂತ ರೀತಿಯಿಂದ ಅವನಿಗೆ ತಿಳಿ ಹೇಳಿದರು .

    ಮಾಡಿದ ತಪ್ಪನ್ನು ಒಪ್ಪಿಕೊಂಡು, ಪಶ್ಚಾತಾಪ ಪಡುತ್ತಾ, ಮುಂದೆ ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಪ್ರಾಯಶ್ಚಿತ. 

ಕೃಪೆ:ಸುವರ್ಣಾ ಮೂರ್ತಿ.
ಸಂಗ್ರಹ: ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097