ದಿನಕ್ಕೊಂದು ಕಥೆ 1124
*🌻ದಿನಕ್ಕೊಂದು ಕಥೆ🌻*
*ಸದುಪಯೋಗದ ಬಗೆ*
ಒಂದೂರಿನಲ್ಲಿ ಧರ್ಮ ದಾಸ ಎಂಬ ವ್ಯಕ್ತಿ ಇರುತ್ತಿದ್ದ. ಮಾತು ಬಹಳ ಸಿಹಿ ಮತ್ತು ಮಧುರವಾಗಿ ನುಡಿಯುತ್ತಿದ್ದರೂ ಕೂಡ ಬಹಳ ಜಿಪುಣ ಆಗಿದ್ದ. ಜಿಪುಣ ಎಂದರೆ ಅಂತಿಂಥ ಜಿಪುಣನಲ್ಲ. ಜೇನಿನಲ್ಲಿ ನೊಣ ಬಿದ್ದರೂ ಆ ನೊಣಕ್ಕೆ ಅಂಟಿದ ಜೇನು ಸವಿದು ನೊಣವನ್ನು ಬಿಟ್ಟು ಕೊಡುವ ಆಸಾಮಿ..! ಚಹದ ಮಾತಿರಲಿ, ಒಂದು ಲೋಟ ನೀರು ಕೂಡ ಯಾರಿಗೂ ಕೇಳುತ್ತಿರಲಿಲ್ಲ. ಸಾಧುಸಂತ, ಭಿಕ್ಷುಕರನ್ನು ನೋಡಿದರೆ ಆಯ್ತು, ಎಲ್ಲಿ ಯಾರು ಏನಾದರೂ ಕೇಳಿಬಿಡುತ್ತಾರೋ ಎಂದು ತನ್ನ ಪ್ರಾಣ ಹಾರಿ ಹೋದ ಹಾಗೆ ಮಾಡುತ್ತಿದ್ದ. ಒಮ್ಮೆ ಅವನ ಬಾಗಿಲಿಗೆ ಒಬ್ಬ ಮಹಾತ್ಮರು ಬರುತ್ತಾರೆ. ಧರ್ಮದಾಸನಿಂದ ಒಂದು ರೊಟ್ಟಿಯನ್ನು ಕೇಳುತ್ತಾರೆ. ಮೊದಮೊದಲಂತೂ ಮಹಾತ್ಮರಿಗೆ ಏನನ್ನು ಕೊಡಲು ನಿರಾಕರಿಸಿದ್ಧ. ಆದರೆ ಮಹಾತ್ಮರು ನಿಂತೇ ಇರುವುದು ನೋಡಿ ಅರ್ಧ ರೊಟ್ಟಿಯನ್ನು ಕೊಡಲು ಬಂದ. ಆಗ ಮಹಾತ್ಮರು ಹೇಳುತ್ತಾರೆ
"- ಈ ಅರ್ಧ ರೊಟ್ಟಿಯಿಂದ ಏನೂ ಆಗದು. ನಾನು ಹೊಟ್ಟೆ ತುಂಬಾ ಊಟ ಮಾಡುವೆ..!"
ಈ ಮಾತನ ಮೇಲೆ ಧರ್ಮದಾಸನು
"ಈ ಅರ್ಧ ರೊಟ್ಟಿ ಹೊರತಾಗಿ ನಾ ಏನೂ ಕೊಡಲಾರೆ"
ಎಂದು ಕಠೋರವಾಗಿ ನಿರಾಕರಿಸಿಬಿಟ್ಟ. ಅಂದು ರಾತ್ರಿ ಎಲ್ಲಾ ಹಸಿವೆ ನೀರಡಿಕೆಗಳಿಂದ ಧರ್ಮದಾಸನ ಬಾಗಿಲಲ್ಲಿ ಮೌನವಾಗಿ ಆ ಮಹಾತ್ಮರು ನಿಂತು ಬಿಟ್ಟರು. ಬೆಳಗ್ಗೆ ಎದ್ದ ತಕ್ಷಣ ಧರ್ಮದಾಸನು ತನ್ನ ಬಾಗಿಲಲ್ಲಿ ಆ ಮಹಾತ್ಮರು ನಿಂತೇ ಇರುವುದನ್ನು ನೋಡಿ
'- ಒಂದು ವೇಳೆ ಇವರಿಗೆ ನಾನು ಹೊಟ್ಟೆ ತುಂಬಾ ಊಟ ಹಾಕದಿದ್ದರೆ, ಹಸಿವು ನೀರಡಿಕೆಗಳಿಂದ ಇವರು ಇಲ್ಲೇ ಸತ್ತೇ ಹೋದರೆ ನನ್ನ ಹೆಸರಿಗೆ ಕಳಂಕ ಬರುವುದು. ವಿನಾಕಾರಣ ಒಬ್ಬ ಸಾಧುಸಂತನ ಹತ್ಯೆಯ ದೋಷಕ್ಕೆ ನಾ ಕಾರಣನಾಗುವೆ. '
ಧರ್ಮದಾಸ ಆಗ ಅವನನ್ನು ಒಳಗೆ ಕರೆದು ತಟ್ಟೆ ಹಾಕಿ ಊಟಕ್ಕೆ ನೀಡುತ್ತಾ
" ಬನ್ನಿ ಪೂಜ್ಯರೇ, ನೀವು ಹೊಟ್ಟೆ ತುಂಬ ಊಟ ಮಾಡಿ..!"
ಎಂದು ಹೇಳಿದ. ಆ ಮಹಾತ್ಮರು ಕೂಡ ಅಂತಿಂಥವರಲ್ಲ. ಅವನಿಗೆ ತಿರುಗೇಟು ಕೊಡುವ ಉದ್ದೇಶದಿಂದ
"- ಈಗ ನನಗೆ ಊಟ ಬೇಕಾಗಿಲ್ಲ, ನಾನು ಊಟ ಮಾಡಲಾರೆ. ನನಗೊಂದು ಬಾವಿಯನ್ನು ತೋಡಿಸಿ ಕೊಡು. "
ಎಂದು ಹೇಳಿದರು.
"ಅರೆ..!, ಊಟದ ಅವಾಂತರದ ನಡುವೆ ಈ ಬಾವಿ ತೊಡವ ಕೆಲಸ ಎಲ್ಲಿಂದ ಬಂತು..!? " ಅಸಮಾಧಾನದಿಂದ ಹೇಳಿದ. ಹಾಗೂ ಬಾವಿ ತೋಡಿಸಿ ಕೊಡುವ ಕೆಲಸವನ್ನು ಒಪ್ಪಿಕೊಳ್ಳಲಿಲ್ಲ.
ಆ ಮಹಾತ್ಮರು ಪುನಃ ರಾತ್ರಿಯಿಡಿ ಧರ್ಮದಾಸನ ಮನೆಯ ಬಾಗಿಲಲ್ಲಿ ಹಸಿವು ನೀರಡಿಕೆಗಳಿಂದ ನಿಂತುಕೊಂಡಿದ್ದರು. ಮುರು ದಿವಸ ಮುಂಜಾನೆದ್ದು ಧರ್ಮದಾಸನು ಬಾಗಿಲು ತೆಗೆದಾಗ ಎದುರಿಗೆ ನಿಂತ ಮಹಾತ್ಮರನ್ನು ಕಂಡು
'- ಈಗ ಇವರಿಗೆ ಬಾವಿ ತೋಡಿಸಿ ಕೊಡದಿದ್ದರೆ ಇವರಂತೂ ನಿಶ್ಚಯವಾಗಿ ಹಸಿವು ನೀರಡಿಕೆಗಳಿಂದ ಸತ್ತು ಹೋಗಬಹುದು ವಿನಾಕಾರಣ ನಾನು ಜನಗಳ ಕೆಟ್ಟ ನಿಂದನೆಗೆ ಗುರಿಯಾಗುವೆನು '
ಎಂದು ಬಹಳ ಆಳವಾಗಿ ಯೋಚನೆ ಮಾಡಿ
" ಸಾಧು ಮಹಾತ್ಮಾರೆ, ಸರಿ ನಾನು ನಿಮಗಾಗಿ ಬಾವಿಯನ್ನು ತೋಡಿಸಿ ಕೊಡುವೆ. ಆದರೆ ಇದರ ಮೇಲೆ ಮತ್ಯಾವ ಕೆಲಸವೂ ಹೇಳಬೇಡಿ . "
ಎಂದು ಹೇಳಿದ. ಅಷ್ಟೇ ದಿಟವಾಗಿ ಆ ಮಹಾತ್ಮರು ಹೇಳಿದರು.
" ಒಂದಲ್ಲ...ಎರಡು ಬಾವಿಗಳನ್ನು ತೋಡಿಸಿ
ಕೊಡಬೇಕಾಗುವುದು ..!"
ಮಹಾತ್ಮರ ವಿನಂತಿಗಳು ಬೆಳೆಯುತ್ತಲೇ ಹೊರಟವು. ಧರ್ಮದಾಸ ಅವಶ್ಯವಾಗಿ ಜಿಪುಣನಾಗಿದ್ದ, ಆದರೆ ಮೂರ್ಖನಾಗಿರಲಿಲ್ಲ. ಅವನು ಯೋಚಿಸಿದನು
'- ನಾನು ಎರಡು ಬಾವಿಗಳನ್ನು ತೋಡಿಸಿ ಕೊಡಲು ಒಪ್ಪದಿದ್ದರೆ ಇವನು ಮುಂದೆ ನಾಲ್ಕು ಬಾವಿಗಳನ್ನು ತೋಡಿ ಕೊಡುವಂತೆ ಹೇಳುವನು..!'
ಹೀಗಾಗಿ ಅವನಿಗಾಗಿ ಎರಡು ಬಾವಿಗಳನ್ನು ತೋಡುವಲ್ಲೇ ತನ್ನ ಒಳ್ಳೆಯತನ ಇದೆ ಎಂದುಕೊಂಡ.
ಬಾವಿ ತೋಡುವ ಕೆಲಸ ಮುಗಿಯಿತು. ಆ ಬಾವಿಗಳಲ್ಲಿ ನೀರು ತುಂಬ ತೊಡಗಿತು. ಯಾವಾಗ ನೀರಿನಿಂದ ಬಾವಿಗಳು ತುಂಬಿದವೋ ಆಗ ಮಹಾತ್ಮರು ಧರ್ಮದಾಸನಿಗೆ ಹೇಳಿದರು
"- ಎರಡು ಬಾವಿಗಳಲ್ಲಿ ಒಂದನ್ನು ನಿನಗೆ ಕೊಟ್ಟು, ಮತ್ತೊಂದನ್ನು ನಾನು ಇಟ್ಟುಕೊಳ್ಳುತ್ತೇನೆ. ಕೆಲವು ದಿನಗಳವರೆಗೆ ನಾನು ಎಲ್ಲೋ ಹೊರಟಿದ್ದೇನೆ. ಆದರೆ, ಗಮನವಿರಲಿ..! ನನ್ನ ಬಾವಿಯಲ್ಲಿನ ಒಂದು ಹನಿ ನೀರನ್ನೂ ನೀ ಮುಟ್ಟಕೂಡದು. ಜೊತೆಗೆ ಊರಿನ ಜನರಿಗೆಲ್ಲ ನಿನ್ನ ಬಾವಿಯಲ್ಲಿರೋ ನೀರೇ ಕೊಡತಕ್ಕದ್ದು. ನಾನು ಹಿಂತಿರುಗಿ ಬಂದು ನನ್ನ ಬಾವಿಯೊಳಗಿನ ನೀರು ಕುಡಿದು ನನ್ನ ದಾಹವನ್ನು ಹಿಂಗಿಸಿಕೊಳ್ಳುವೆ."
ಈ ಮಾತಿಗೆ ಧರ್ಮದಾಸನು ಮಹಾತ್ಮರ ಬಾವಿಯ ಬಾಯಿಗೆ ದೊಡ್ಡ ಮುಚ್ಚಳವನ್ನು ಮಾಡಿ ಮುಚ್ಚಿಸಿಬಿಟ್ಟ. ಆ ನಂತರ ಊರಿನ ಎಲ್ಲ ಜನರು ಧರ್ಮದಾಸನ ಬಾವಿಯಲ್ಲಿಯೇ ನೀರು ತುಂಬ ತೊಡಗಿದರು. ಊರಿನ ಜನರೆಲ್ಲ ನೀರು ಒಯ್ದರೂ ಬಾವಿಯ ನೀರು ಸ್ವಲ್ಪವೂ ಕಡಿಮೆ ಆಗುತ್ತಿರಲಿಲ್ಲ. ಶುದ್ಧ ಮತ್ತು ಸ್ವಚ್ಛ ಸಿಹಿ ನೀರನ್ನು ನೋಡಿ ಊರಿನ ಜನರೆಲ್ಲ ಸಂಭ್ರಮ ಪಟ್ಟರು. ಯಾವ ದಣಿವನ್ನು ಅರಿಯದೆ ಮಹಾತ್ಮರ ಗುಣಗಾನವನ್ನು ಮಾಡುತ್ತಿದ್ದರು.
ಒಂದು ವರ್ಷದ ಬಳಿಕ ಮಹಾತ್ಮರು ಆ ಊರಿಗೆ ಬಂದರು ಮತ್ತು ತನ್ನ ಬಾವಿಯ ಬಾಯಿಯನ್ನು ತೆಗೆಯಲು ಹೇಳಿದರು. ಧರ್ಮದಾಸನು ಆ ಬಾವಿಯ ಮುಚ್ಚಳವನ್ನು ತೆಗೆಸಿದನು. ಜನರು ಕುತೂಹಲದಿಂದ ನೋಡಿದರು. ಆದರೆ ಏನು ಆಶ್ಚರ್ಯ..!? ಮಹಾತ್ಮರ ಬಾವಿಯಲ್ಲಿ ಒಂದು ಹನಿ ನೀರೂ ಇದ್ದಿಲ್ಲ. ಆಗ ಮಹಾತ್ಮರು ಹೇಳುತ್ತಾರೆ.
"- ಬಾವಿಯಿಂದ ಎಷ್ಟು ನೀರು ತೆಗೆದರೂ ಅದು ಯಾವತ್ತೂ ಮುಗಿಯುವುದೇ ಇಲ್ಲ ಬದಲಾಗಿ ಹೆಚ್ಚೆಚ್ಚು ವೃದ್ಧಿಯಾಗುತ್ತ ಹೋಗುತ್ತದೆ. ಬಾವಿಯಲ್ಲಿನ ನೀರು ತೆಗೆಯದೇ ಹೋದರೆ ಆ ಬಾವಿ ಹಾಳುಬಿದ್ದು ಒಣಗಿ ಹೋಗುತ್ತದೆ. ಇದರ ಪ್ರಮಾಣವು ನಿನ್ನ ಎದುರೇ ಸ್ಪಷ್ಟವಾಗಿದೆ. ಯಾವುದೇ ಕಾರಣದಿಂದ ಬಾವಿಯ ನೀರನ್ನು ಉಪಯೋಗಿಸಿಕೊಳ್ಳದೆ ಹಾಗೇ ಬಿಟ್ಟರೆ ಆ ಬಾವಿ ಒಣಗುವುದಲ್ಲದೆ ಒಂದು ವೇಳೆ ನೀರು ಇದ್ದರೆ ಅದು ಕೊಳೆತು ಹೋಗಬಹುದು ಮತ್ತು ಯಾವುದೇ ಕೆಲಸಕ್ಕೆ ಉಪಯೋಗವಾಗುವುದಿಲ್ಲ." ಎಂದು ಹೇಳುತ್ತಾ ಮುಂದುವರೆದು -
"- ಬಾವಿಯ ನೀರಿನ ಹಾಗೆಯೇ ಧನಸಂಪತ್ತಿನ ಅವಸ್ಥೆಯು ಇದೆ. ಇದರಲ್ಲಿ ನಶೆ ಮಾಡುವುದು ದುರುಪಯೋಗದ್ದಾಗಿದೆ. ಧನ ಸಂಪತ್ತಿನ ಸದುಪಯೋಗವು ಎಷ್ಟು ಮಾಡುತ್ತಿರೋ ಅಷ್ಟು ವೃದ್ಧಿಯಾಗುತ್ತಾ ಹೋಗುತ್ತದೆ. ಧನಸಂಪತ್ತಿನ ಉಪಯೋಗವು ಮಾಡದೇ ಇದ್ದಲ್ಲಿ ಅದು ಕೂಡ ಬಾವಿಯ ನೀರಿನ ಹಾಗೆ ವ್ಯರ್ಥವಾಗಿ ಹೋಗುತ್ತದೆ ಅಥವಾ ಅದು ಸಂಭವವಾಗದಿದ್ದಲ್ಲಿ ಬೇರೆ ಯಾರೋ ಅದರ ಉಪಯೋಗವನ್ನು ಪಡೆಯುತ್ತಾರೆ. ಸಮಯದೊಂದಿಗೆ ಬೆಳೆಯುವ ಸಂಪತ್ತಿನ ಉಪಯೋಗವನ್ನು ಸದುಪಯೋಗ ಮಾಡಿಕೊಳ್ಳುವುದು ಅನಿವಾರ್ಯವಾಗಿರುತ್ತದೆ ಅದೇ ರೀತಿ ಜ್ಞಾನವು ಕೂಡ ನಿಸ್ಸಂದೇಹವಾಗಿ ಇದೇ ಸ್ಥಿತಿಯಲ್ಲಿರುತ್ತದೆ. ಧನ ಸಂಪತ್ತನ್ನು ಅವಶ್ಯವಿದ್ದವರಿಗೆ, ದುರ್ಬಲರಿಗೆ ವಿನಿಯೋಗಿಸಿದಂತೆ ಜ್ಞಾನವನ್ನು ಕೂಡ ಒಬ್ಬರಿಂದ ಒಬ್ಬರಿಗೆ ಹಂಚುತ್ತಾ ಹೋಗುಬೇಕು. ನಮ್ಮ ಸಮಾಜದಲ್ಲಿ ಅಧಿಕ ಜ್ಞಾನವಂತರು, ಅಧಿಕ ಶಿಕ್ಷಿತರು, ಸುಸಂಸ್ಕೃತರು ಇದ್ದಷ್ಟು, ಅಷ್ಟೇ ದೇಶದ ತುಂಬ ಸುಖ, ಶಾಂತಿ, ಸಮೃದ್ಧಿಯು ಆಗುತ್ತದೆ ಮತ್ತು ಜ್ಞಾನವನ್ನು ಹಂಚುವವರು ಅಥವಾ ಶಿಕ್ಷಣದ ಪ್ರಚಾರವನ್ನು ಮಾಡುವವರಿಂದ ಪ್ರಗತಿಯು ಬಾವಿಯ ನೀರಿನ ಹಾಗೆ ಬೆಳೆಯುತ್ತದೆ. "
ಮಹಾತ್ಮರ ಮಾತುಗಳನ್ನು ಕೇಳಿ ಧರ್ಮ ದಾಸನು ಹೇಳಿದನು
"- ಹೌದು ಪೂಜ್ಯರೆ, ನೀವು ಸತ್ಯವಾದದನ್ನು ಹೇಳುತ್ತಿರುವಿರಿ. ನನಗೆ ನನ್ನ ತಪ್ಪಿನ ಅರಿವಾಯಿತು. "
ಎಂದು ಮಹಾತ್ಮರ ಪಾದಕ್ಕೆ ಬಿದ್ದನು. ಈ ಘಟನೆಯಿಂದ ಧರ್ಮದಾಸನಿಗೆ ನಿಶ್ಚಿತವಾದ ದಾರಿ ಮತ್ತು ಜೀವನದ ಸರಿಯಾದ ದಿಕ್ಕು ತಿಳಿಯಿತು.
ಓಂ ಶ್ರೀ ಗುರುಭ್ಯೋ ನಮಃ 🙏 (ಸು. ಜಾ.)
ಕೃಪೆ ನಿತ್ಯ ಸತ್ಯ.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment