ದಿನಕ್ಕೊಂದು ಕಥೆ 1023
*🌻ದಿನಕ್ಕೊಂದು ಕಥೆ🌻* *ಸರ್ವಂ ಶ್ರೀ ಕೃಷ್ಣಾರ್ಪಣಂ.* ಒಂದು ಸ್ವಾರಸ್ಯವಾದ ಕತೆ. ಮುಲ್ಲೈಕ್ಕೊಡು ಎಂದು ತಮಿಳುನಾಡಿನ ಒಂದು ಪುಟ್ಟ ಗ್ರಾಮ. ಅಲ್ಲಿ ಶ್ರೀಕೃಷ್ಣ ನ ಒಂದು ಸುಂದರವಾದ ದೇವಾಲಯ. ಅರ್ಚಕರೂ ಅವರಿಗೆ ಸಹಾಯಕನಾಗಿದ್ದ ತುಳಸಿ ಎಂಬ ಯುವಕನೂ ದಿನವೂ ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ಶುಚಿಯಾಗಿ ದೇವಸ್ಥಾನಕ್ಕೆ ಬರುತ್ತಿದ್ದರು. ದೇವಾಲಯದ ಪಕ್ಕದಲ್ಲೇ ಒಂದು ಹೂದೋಟ. ತೋಟದಿಂದ ಹೂಗಳನ್ನು ತಂದು ದೇವರೀಗೆ ಮಾಲೆಯಾಗಿ ಕಟ್ಟಿಕೊಡುವ ಕೆಲಸ ತುಳಸಿಯದು. ಅವನೋ ಪರಮ ಕೃಷ್ಣ ಭಕ್ತ. ಸದಾ ಕೃಷ್ಣಧ್ಯಾನ ನಿರತ. ತೋಟದಲ್ಲಿ ಹೂಗಳನ್ನು ಕೀಳುವಾಗಲೂ ಅವನಿಗೆ ಕೃಷ್ಣನದೇ ನೆನಪು. ಕೃಷ್ಣಾರ್ಪಣಂ ಎಂದು ಮನದಲ್ಲಿ ಹೇಳಿಕೊಂಡೇ ಹೂಗಳನ್ನು ಕಿತ್ತು ಪೋಣಿಸಿ ಹಾರ ಮಾಡುವನು ಈ ಭಕ್ತ. ಹತ್ತು ಹದಿನೈದು ಮಾಲೆಗಳನ್ನು ಸಿದ್ಧ ಪಡಿಸಿದ ಮೇಲೆ ಕೃಷ್ಣನಿಗೆ ಅವನ್ನು ತಾನೇ ಮುಡಿಸಿದಂತೆ ಭಾವಿಸಿಕೊಂಡು ಅದೇ ನೆನಪಿನಲ್ಲೇ ಅರ್ಚಕರ ಬಳಿಗೆ ಅವನ್ನು ತಲುಪಿಸಿಬಿಡುವನು. ಇತ್ತ ಅರ್ಚಕರು ಅವನಿತ್ತ ಮಾಲೆಗಳನ್ನು ಶ್ರೀ ಕೃಷ್ಣನ ಮಂಗಳ ಮೂರ್ತಿಗೆ ಮುಡಿಸಿ ಅಲಂಕಾರ ಮಾಡಲು ಹೋದರೆ, ಅದಾಗಲೇ ದೇವರು ಒಂದು ಹೊಸ ಮಾಲೆಯನ್ನು ಧರಿಸಿ ಹುರುಪಿನೊಂದಿಗೆ ಇವರನ್ನು ಎದುರುಗೊಳ್ಳಲು ಸಿದ್ಧನಾಗಿರುತ್ತಿದ್ದ. ಹಳೆಯ ನಿರ್ಮಾಲ್ಯವನ್ನು ತೆಗೆದು ಹೊಸ ಮಾಲೆಯನ್ನು ದೇವರಿಗೆ ಹಾಕಿ ಅಲಂಕಾರ ಮಾಡಬೇಕೆಂದಿದ್ದ ಅರ್ಚಕರಿಗೆ ಒಂದು ಕಡೆ ನಿರಾಸೆ. ಇನ್ನೊಂದೆಡೆ ಅಚ್ಚರಿ. ಇದು ಹೇಗೆ ಸಾಧ್ಯ ?